ಮಡಿಕೇರಿ ಜ.8 : ತುಮಕೂರು ಜಿ.ಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ರಾಜ್ಯ ಸರ್ಕಾರ ವಜಾಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಹಾಗೂ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಸಹನೆ ಕಳೆದುಕೊಂಡು ಕಾರ್ಯಾಂಗಕ್ಕೆ ಅಪಮಾನವೆಸಗುವಾಗ ಸರ್ಕಾರ ಮೌನಕ್ಕೆ ಶರಣಾಗುವುದು ಸರಿಯಲ್ಲವೆಂದು ಹೇಳಿದ್ದಾರೆ.
ಈ ಹಿಂದೆ ಕೂಡ ಸಚಿವ ಮಾಧುಸ್ವಾಮಿ ಅವರು ರೈತ ಮಹಿಳೆಯೊಬ್ಬರನ್ನು ನಿಂಧಿಸಿದ್ದಾರೆ. ಇದೀಗ ತುಂಬಿದ ಸಭೆಯಲ್ಲಿ ಅಧಿಕಾರಿಯೊಬ್ಬರ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಿದ್ದಾರೆ. ಇದು ಸಚಿವರ ಅಧಿಕಾರದ ದರ್ಪವೆಂದು ಆರೋಪಿಸಿರುವ ದಿವಾಕರ್, ಸರ್ಕಾರ ತಕ್ಷಣ ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಜನರಿಂದ ಆಯ್ಕೆಯಾಗಿ ಸಚಿವರಾದವರಿಗೆ ಸಹನೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಸಾಧಯವಾಗದಿದ್ದಲ್ಲಿ ಸಚಿವ ಸ್ಥಾನದಲ್ಲಿ ಉಳಿಯಬಾರದು. ಶಾಸಕಾಂಗ ಮತ್ತು ಕಾರ್ಯಾಂಗ ಜೋಡೆತ್ತಿನಂತೆ ಕಾರ್ಯ ನಿರ್ವಹಿಸಿದಾಗ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯವೇ ಹೊರತು ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವುದು ಸರಿಯಲ್ಲ. ಅಧಿಕಾರ ವರ್ಗ ರಾತ್ರಿ, ಹಗಲೆನ್ನದೆ ಶ್ರಮಿಸಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಕೊಡಗು ಜಿಲ್ಲೆಯಲ್ಲೂ ಈ ರೀತಿಯ ಅನುಭವ ಅಧಿಕಾರಿಗಳಿಗೆ ಆಗಿದೆ ಎಂದು ದಿವಾಕರ್ ಹಾಗೂ ದೀಪಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಂದ ಅವಮಾನವಾದರೆ ಸಮಿತಿ ವತಿಯಿಂದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿರುವ ಅವರು, ತಕ್ಷಣ ಸರ್ಕಾರ ಮಾಧುಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.