ದುಷ್ಕರ್ಮಿಗಳಿಂದ ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ: ಭದ್ರತೆ ಬಿಗಿ

ಅಹಮದಾಬಾದ್: ಗುಜರಾತ್ ವಿವಿಯ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವೇಳೆ ನಡೆದ ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳನ್ನು ಹೊಸ ಹಾಸ್ಟೆಲ್‌ಗೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿ,ದ್ದು, ಸಲಹಾ ಸಮಿತಿಯನ್ನು ರಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯವು ಹಾಸ್ಟೆಲ್ ಬ್ಲಾಕ್‌ಗಳ ಭದ್ರತೆಯನ್ನು ಬಲಪಡಿಸಲು ಮಾಜಿ ಸೇನಾ ಸಿಬಂದಿಗಳನ್ನು ನಿಯೋಜಿಸಲು ಭದ್ರತಾ ಏಜೆನ್ಸಿಗಳಿಗೆ ನಿರ್ದೇಶನ ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
20 ರಿಂದ 25 ಮಂದಿ ಶನಿವಾರ ರಾತ್ರಿ ಹಾಸ್ಟೆಲ್ ಆವರಣವನ್ನು ಪ್ರವೇಶಿಸಿ ನಮಾಜ್ ಮಾಡುವುದನ್ನು ವಿರೋಧಿಸಿ, ಮಸೀದಿಗೆ ಹೋಗಲು ಹೇಳಿದ್ದಾರೆ. ವಾಗ್ವಾದಕ್ಕಿಳಿದು ವಿದ್ಯಾರ್ಥಿಗಳ ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿ ಕೊಠಡಿಗಳನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದ 75 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಂಗಿದ್ದ ಎ-ಬ್ಲಾಕ್ ಹಾಸ್ಟೆಲ್ ಆವರಣದಲ್ಲಿ ದಾಂಧಲೆ ನಡೆಸಲಾಗಿದೆ ಎಂದು ವಿಸಿ ಗುಪ್ತಾ ಹೇಳಿದ್ದಾರೆ.

ಹಲ್ಲೆಯ ನಂತರ ಶ್ರೀಲಂಕಾದಿಂದ ಮತ್ತು ತಜಕಿಸ್ಥಾನದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿತೇಶ್ ಮೇವಾಡ ಮತ್ತು ಭರತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಅಫ್ಘಾನಿಸ್ಥಾನ, ತಜಕಿಸ್ಥಾನ್, ಶ್ರೀಲಂಕಾ ಮತ್ತು ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಸುಮಾರು 300 ಅಂತಾ ರಾಷ್ಟ್ರೀಯ ವಿದ್ಯಾರ್ಥಿಗಳು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories