ವಿಜಯಪುರ: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸೂಚನೆ ನೀಡಿದ್ದಾರೆ.
ವಿಜಯಪುರ ನಗರದ ದೌಲತ ಕೋಠಿ ಪ್ರದೇಶದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ ಸಂಖ್ಯೆ- 1ಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಇತ್ತೀಚಿಗೆ ಈ ಶಾಲೆಯಲ್ಲಿ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು.ಈ ಕುರಿತು ಸ್ಥಳದಲ್ಲಿದ್ದ ನಾನಾ ಮುಖಂಡರು ಘಟನೆ ಮತ್ತು ಶಾಲೆಯ ಕೊಠಡಿಗಳ ಪರಿಸ್ಥಿತಿಯ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ವಿಜಯಪುರ ನಗರ ಬಿಇಓ ಬಸವರಾಜ ತಳವಾರ ಮಾತನಾಡಿ ಘಟನೆಯ ಬಳಿಕ ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ದೂರವಾಣಿ ಕರೆ ಮಾಡಿದ ಸಚಿವರು ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಶಾಲಾ ಕೊಠಡಿಗಳ ಕುರಿತು ಆದ್ಯತೆಯ ಮೇರೆಗೆ ಪಟ್ಟಿ ತಯಾರಿಸಿ ಶೀಘ್ರದಲ್ಲಿ ವರದಿ ಸಲ್ಲಿಸಬೇಕು. ದುರಸ್ಥಿ ಅಗತ್ಯವಾಗಿರುವ ಶಾಲಾ ಕೊಠಡಿಗಳ ಬಗ್ಗೆಯೂ ಮಾಹಿತಿ ನೀಡಬೇಕು. ಅಲ್ಲದೇ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ ಸಚಿವರು, ಜಿಲ್ಲಾಧಿಕಾರಿಗಳು ವರದಿ ನೀಡಿದ ನಂತರ ನಾನೂ ಕೂಡ ಸಂಬಂಧಿಸಿದ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ತುರ್ತು ಅಗತ್ಯವಿರುವ ಕಡೆ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ, ನಾಲ್ಕು ಶಾಲಾ ಕೊಠಡಿಗಳ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಳಿಕ ಶಾಲಾ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಸಚಿವರು, ಎಲ್ಲರೂ ಚೆನ್ನಾಗಿ ಓದಬೇಕು. ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಸೈಯದ್ ಅಪ್ತಾಬ್ ಖಾದ್ರಿ, ಅಬ್ದುಲ್ ರಜಾಕ್ ಹೊರ್ತಿ, ಮೈನೂದ್ದೀನ್ ಬೀಳಗಿ, ಇದ್ರುಸ್ ಬಕ್ಷಿ, ಶಫೀಕ್ ಬಗದಾದಿ, ವಸಂತ ಹೊನಮೊಡೆ, ಡಾ. ಮುನೀರ್ ಬಾಂಗಿ, ಮುಕ್ತಾರ್ ಸಾಲ್ವಾಟಿ, ಮೆಹಬೂಬಪಾಷಾ ಮುಲ್ಲಾ, ಅಬ್ದುಲ್ ಖಾದರ್ ಖಾದಿಂ, ನವೀದ್ ಚೋಪದಾರ್, ಮೆಹಬೂಬ್ ತೆನಳ್ಳಿ, ಜಿ. ಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.