ಚಿಕ್ಕಮಗಳೂರು, ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ; ತಗ್ಗು ಪ್ರದೇಶಗಳು ಜಲಾವೃತ | ದ.ಕ: ಮನೆ ಕುಸಿತ – ಮಕ್ಕಳು ಪಾರು

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ನೀಡಿ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನದಿಗಳು, ಹಳ್ಳ, ತೊರೆಗಳು ಉಕ್ಕಿ ಹರಿಯುತ್ತಿವೆ. ಭಾಗಮಂಡಲ-ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಮಳೆಯಿಂದಾಗಿ ನೂತನ ಉದ್ಯಾನವನ, ಭಾಗಮಂಡಲ-ನಾಪೋಕ್ಲು ರಸ್ತೆ ಮುಳುಗಿದೆ.

ಕೊಡಗು ಜಿಲ್ಲೆಯಲ್ಲಿ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಅಮ್ಮತ್ತಿ ಗ್ರಾಮದಲ್ಲಿ ಮರ ಉರುಳಿ ಬಿದ್ದು ಕಾರು ಜಖಂಗೊಂಡಿದೆ. ಮರ ಬಿದ್ದಿದ್ದರಿಂದ ವಿದ್ಯುತ್ ಕಂಬ ಕೂಡ ತುಂಡಾಗಿ ಬಿದ್ದು ಕಾರು ಜಖಂಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ದ.ಕ: ಮನೆ ಕುಸಿತ – ಮಕ್ಕಳು ಪಾರು

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಜೈನರಗುರಿ ಎಂಬಲ್ಲಿ ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಕುಸಿದಿದೆ. ಮನೆಯವರು ಇಬ್ಬರು ಮಕ್ಕಳನ್ನ ಪಾರು ಮಾಡಿದ್ದಾರೆ. ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿಯಾಗಿದೆ. ಮಜೀದ್ ಮತ್ತು ಅವರ ಇಬ್ಬರು ಮಕ್ಕಳು ಮಲಗಿದ್ದ ಕೊಠಡಿ ಮೇಲೆ ಮಣ್ಣು ಬಿದ್ದಿದ್ದು ತಕ್ಷಣ ಎಚ್ಚೆತ್ತು ಮಣ್ಣಿನಡಿ ಇದ್ದ ಇಬ್ಬರು ಮಕ್ಕಳನ್ನ ತಂದೆ ಪಾರು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿದ್ದು ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಭಾರಿ ಮಳೆಯಿಂದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ಕುಮಾರಧಾರ ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ‌ ನೀಡಲಾಗಿದೆ.

ಉಡುಪಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಜಿಲ್ಲೆಯಲ್ಲಿ ರಾತ್ರಿಯಿಡಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ತಗ್ಗು ಪ್ರದೇಶದಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷವೂ ಇಲ್ಲಿ ನೆರೆಹಾವಳಿ ಎದುರಾಗುತ್ತೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯೇ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು.

1001314682 Crime

Latest Indian news

Popular Stories