ಚೆನ್ನೈ: ತಮ್ಮ ಪಕ್ಷ ಎಂಎನ್‌ಎಂನ ರಾಜಕೀಯ ಮೈತ್ರಿಗಾಗಿ ಚರ್ಚೆಗಳು ನಡೆಯುತ್ತಿವೆ ಮತ್ತು ದೇಶದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ಬಣವನ್ನು ಬೆಂಬಲಿಸುವುದಾಗಿ ನಟ-ರಾಜಕಾರಣಿ ಕಮಲ್ ಹಾಸನ್ ಬುಧವಾರ ಒತ್ತಿ ಹೇಳಿದರು.
‘ಮಕ್ಕಳ್ ನೀದಿ ಮೈಯಂ’ (ಎಂಎನ್ಎಂ) ನ 7ನೇ ವಾರ್ಷಿಕೋತ್ಸವದ ನಂತರ ಇಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಿಳು ನಟ ವಿಜಯ್ ಅವರು ಇತ್ತೀಚಿಗೆ ರಾಜಕೀಯ ಪ್ರವೇಶಿರುವುದನ್ನು ಸ್ವಾಗತಿಸಿದರು.
ಎಂಎನ್ಎಂ ಪಕ್ಷದ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಈಗಾಗಲೇ ಹೇಳಿದ್ದೇನೆ, ಪಕ್ಷ ರಾಜಕಾರಣವನ್ನು ಬದಿಗಿಟ್ಟು ರಾಷ್ಟ್ರದ ಬಗ್ಗೆ ಯೋಚಿಸಬೇಕಾದ ಸಮಯ ಇದು. ನಮ್ಮ ಪಕ್ಷ ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ಮೈತ್ರಿಯ ಭಾಗವಾಗಿರಲು ಬಯಸುತ್ತದೆ’ ಎಂದರು.
ವಿಭಜಿಸುವ ರಾಜಕೀಯ ಮಾಡುವವರೊಂದಿಗೆ ಎಂಎನ್ಎಂ ಕೈಜೋಡಿಸುವುದಿಲ್ಲ ಎಂದು ಅವರು ಹೇಳಿದರು.
ತಮ್ಮ ಪಕ್ಷದ ಸಂಭವನೀಯ ರಾಜಕೀಯ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಚರ್ಚೆಗಳು ನಡೆಯುತ್ತಿವೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ಒಳ್ಳೆಯ ಸುದ್ದಿ ಇದ್ದರೆ ಮಾಧ್ಯಮಗಳಿಗೆ ತಿಳಿಸಲಾಗುವುದು’ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಕಮಲ್ ಹಾಸನ್ ಪಕ್ಷವು ಮೈತ್ರಿ ಮಾತುಕತೆಯಲ್ಲಿ ತೊಡಗಿದೆ ಎಂಬ ಊಹಾಪೋಹಗಳು ಕೇಳಿಬಂದಿವೆ.
ಎಂಎನ್ಎಂ ಈ ಹಿಂದೆ 2019ರ ಲೋಕಸಭಾ ಚುನಾವಣೆ ಮತ್ತು 2021 ರ ತಮಿಳುನಾಡು ವಿಧಾನಸಭೆ ಚುನಾವಣೆಗಳನ್ನು ಎದುರಿಸಿತ್ತು. ಆದರೆ, ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ.