ಕಲಬುರಗಿ: ಡಿಸೆಂಬರ್ 19 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್

ಕಲಬುರಗಿ.ಡಿ.9:-ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಇದೇ ಡಿಸೆಂಬರ್ 19 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಅದಾಲತ್ ಆಯೋಜಿಸಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜೆ. ಸತೀಶ ಸಿಂಗ್ ಅವರು ತಿಳಿಸಿದ್ದಾರೆ.
ಅದೇ ರೀತಿ ಈ ಮೆಗಾ ಲೋಕ ಅದಾಲತ್‍ನ್ನು ಮೇಲ್ಕಂಡ ದಿನದಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಸಹ ಹಮ್ಮಿಕೊಳ್ಳಲಾಗಿದೆ. ಈ ಲೋಕ ಅದಾಲತ್‍ನಲ್ಲಿ ರಾಜೀಯಾಗಬಹುದಾದ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ ವಾಹನ ಅಪಘಾತ ಪರಿಹಾರ ಕುರಿತಾದ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ.
ರಾಜೀಯಾಗಬಹುದಾದ ಪ್ರಕರಣಗಳ ಬಗ್ಗೆ ಕಕ್ಷಿದಾರರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ರಾಜೀಸಂಧಾನಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಸುಸ್ತಿ ಸಾಲದ ಬಗ್ಗೆ ಸಾಲಗಾರರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಪರ್ಕಿಸಿದ್ದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ರಾಜೀ ಸಂಧಾನ ಏರ್ಪಡಿಸಿ ಬಡ್ಡಿಯನ್ನು ಮನ್ನಾ ಮಾಡಿಸಿ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ. ಈ ಲೋಕ ಅದಾಲತ್‍ನಲ್ಲಿ ರಾಜೀಯಾದ ಪ್ರಕರಣಗಳಲ್ಲಿ ಹೊರಡಿಸಿದ ಅವಾರ್ಡ್, ಆದೇಶಕ್ಕೆ ನ್ಯಾಯಾಲಯದಲ್ಲಿ ಹೊರಡಿಸಿದ ಆದೇಶ ಅಥವಾ ಡಿಕ್ರಿಗೆ ಇರುವಷ್ಟೇ ಮಾನ್ಯತೆ ಇರುತ್ತದೆ.
ಮೆಗಾ ಲೋಕ ಅದಾಲತ್ ಪ್ರಯೋಜನ: ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಲ್ಲಿ ಖರ್ಚು ಹಾಗೂ ಸಮಯ ಉಳಿತಾಯವಾಗುತ್ತದೆ. ಇದರಿಂದ ಕಕ್ಷೀದಾರರ ನಡುವೆ ಇರುವ ಸಂಬಂಧವು ಉತ್ತಮವಾಗಿ ಉಳಿದುಕೊಳ್ಳುತ್ತದೆ. ಲೋಕ ಅದಾಲತ್‍ನಲ್ಲಿ ಬರುವ ಪ್ರಕರಣಗಳಿಗೆ ಯಾವುದೇ ಕೋರ್ಟ್ ಶುಲ್ಕ ಕೊಡಬೇಕಾಗಿಲ್ಲ. ನ್ಯಾಯಾಲಯದಲ್ಲಿ ಚಾಲ್ತಿಯಿರುವ ಪ್ರಕರಣ ಲೋಕ ಅದಾಲತ್‍ನಲ್ಲಿ ರಾಜೀಯಾದಲ್ಲಿ ಶೇ. 100 ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಅಲ್ಲದೇ ಲೋಕ ಅದಾಲತ್‍ನಲ್ಲಿ ಹೊರಡಿಸಲಾದ ಅವಾರ್ಡ್ ಅಥವಾ ಆದೇಶ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ.
ಕಕ್ಷೀದಾರರು ಹಾಗೂ ಸಾರ್ವಜನಿಕರು ಇದೇ ಡಿಸೆಂಬರ್ 19 ರಂದು ಕಲಬುರಗಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾದ ಮೆಗಾ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Latest Indian news

Popular Stories