ಕಾರ್ಕಳ: ಅಂಗಡಿಯ ಮುಂದೆ ಟಿಪ್ಪರ್‌ ಅಡ್ಡ ಇಟ್ಟು ಜ್ಯುವೆಲ್ಲರಿ ಅಂಗಡಿ ದರೋಡೆ – ಬೆಚ್ಚಿ ಬಿದ್ದ ಜನ!

ಕಾರ್ಕಳ: ನಿಟ್ಟೆ ಗ್ರಾಮದ ಆರಾಧ್ಯ ಜುವೆಲರಿ ಅಂಗಡಿಗೆ ಫೆ. 27ರಂದು ಕಳ್ಳರು ಬೆಳಗ್ಗೆ ಸುಮಾರು 2 ಗಂಟೆ ವೇಳೆಗೆ ನುಗ್ಗಿ 20 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ದರೋಡೆಗೈದ ಘಟನೆ ನಡೆದಿದೆ.

ಕಳ್ಳತನ ನಡೆಸಲು ಅಂಗಡಿಯ ಮುಂದೆ ಟಿಪ್ಪರ್‌ ಅಡ್ಡ ಇಟ್ಟು ರಾಜಾರೋಷವಾಗಿ ಕೃತ್ಯ ಎಸಗಿದ್ದಾರೆ. ಯಾವುದೇ ರೀತಿಯಲ್ಲಿ ಗುರುತು ಸಿಗದ ಹಾಗೆ ಮುಖಕ್ಕೆ ಮುಸುಕು ಹಾಕಿಕೊಂಡು, ಅಂಗಡಿಯ ಬೀಗ ಒಡೆದು ಗ್ಲಾಸ್‌ ಒಡೆದು ಒಳಪ್ರವೇಶಿಸಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯೊಂದರ ವಾಚ್‌ಮನ್‌ ಅಲ್ಲಿಗೆ ಹೋದಾಗ ಅವರಿಗೆ ಕಳ್ಳರು ಪಿಸ್ತೂಲ್‌ ತೋರಿಸಿ ಹೆದರಿಸಿ ಕಳವು ನಡೆಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಬೀದಿ ದೀಪ ಇದ್ದರೂ, ನಿರ್ಭೀತಿಯಿಂದ ಕಳ್ಳತನ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜುವೆಲ್ಲರಿ ಅಂಗಡಿಗಳಿಂದ ಕಳ್ಳತನ ನಡೆಸುವ ಕೃತ್ಯಗಳು ಹೆಚ್ಚಾಗಿದ್ದು, ಚಿನ್ನಾಭರಣ ಮಾರಾಟ ಮಳಿಗೆಯವರು ಭೀತಿಕೊಂಡಿದ್ದಾರೆ. ಕಳ್ಳತನದ ಹಿಂದೆ ದೊಡ್ಡ ಜಾಲವಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಳ್ಳತನದ ಮೊದಲು ಕೃತ್ಯ ಹೊರಗೆ ತಿಳಿಯದಂತೆ ಸಾಕಷ್ಟು ರಕ್ಷಣ ವ್ಯವಸ್ಥೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಣ್ಣ ನೆಟ್‌ ತರಹದ ಬಲೆಯನ್ನು ಕೃತ್ಯ ನಡೆಯುವುದು ಹೊರಗೆ ಕಾಣದಂತೆ ಅಡ್ಡವಾಗಿ ಕಟ್ಟಿಕೊಂಡಿದ್ದರು.

ಜುವೆಲರ್ಸ್‌ ಒಳಗೆ ಬೀಗ ಮುರಿದು ಗ್ಲಾಸ್‌ ಒಡೆದು ಒಳಹೊಕ್ಕಿದ್ದ ಕಳ್ಳರು ರಿಪೇರಿಗೆಂದು ತಂದಿರಿಸಿದ್ದ ಬೆಳ್ಳಿಯ ಆಭರಣವನ್ನಷ್ಟೆ ಕದ್ದೊಯ್ಯಲು ಸಫ‌ಲರಾಗಿದ್ದರು. ಗಡಿಬಿಡಿಯಲ್ಲಿದ್ದ ಕಳ್ಳರು ಕಡಿಮೆ ಅವಧಿಯಲ್ಲಿ ಕಳವು ನಡೆಸಿ ಎಸ್ಕೇಪ್‌ ಆಗಲು ಯೋಜನೆ ರೂಪಿಸಿಕೊಂಡಂತಿತ್ತು. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಲಾಕರ್‌ನಲ್ಲಿ ಭದ್ರವಾಗಿಟ್ಟಿದ್ದರಿಂದ ಅವುಗಳನ್ನು ಕದ್ದೊಯ್ಯಲು ಕಳ್ಳರಿಗೆ ಸಾಧ್ಯವಾಗಿಲ್ಲ.

ಕಳ್ಳತನ ನಡೆಸಲು ಬಂದವರು ಟಿಪ್ಪರ್‌ ಹಾಗೂ ಕಾರಿನಲ್ಲಿ ಬಂದಿರುವ ಸಾಧ್ಯತೆಯಿದೆ. ಟಿಪ್ಪರ್‌ನಲ್ಲಿ ಇಬ್ಬರು ಹಾಗೂ ಕಾರಿನಲ್ಲಿ ಇಬ್ಬರು ಹೀಗೆ ನಾಲ್ವರು ಬಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಿಸಿ ಕೆಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಅಂಗಡಿ ಮುಂದೆ ನಿಲ್ಲಿಸಿದ್ದರಿಂದ ಹೆಚ್ಚಿನವರಿಗೆ ಕೃತ್ಯ ಅರಿವಿಗೆ ಬರುವುದಿಲ್ಲ ಎನ್ನುವುದು ಒಂದೆಡೆಯಾದರೆ, ಬಟ್ಟೆ ಬದಲಿಸಲು ಕೂಡ ಟಿಪ್ಪರ್‌ ಬಳಸಿಕೊಂಡಿದ್ದಾರೆ ಎನ್ನುವ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೃತ್ಯ ನಡೆಯುವ ನಸುಕಿನ ಸಮಯ ಪೊಲೀಸರು ಇದೇ ಮಾರ್ಗದಲ್ಲಿ ಬೀಟ್‌ ನಡೆಸುತ್ತಲಿದ್ದರು. ಅವರು ಅತ್ತ ಕಡೆಯಿಂದ ಬೀಟ್‌ ಮುಗಿಸಿಕೊಂಡು ವಾಹನ ತಪಾಸಣೆ ನಡೆಸುತ್ತಿದ್ದರು. ಇದರ ಮುನ್ಸೂಚನೆ ಅರಿತ ಕಳ್ಳರು ಗಡಿಬಿಡಿಯಲ್ಲಿ ಘಟನ ಸ್ಥಳದಿಂದ ಎಸ್ಕೇಪ್‌ ಆಗಲು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಮುಂದಕ್ಕೆ ವಾಹನ ತಪಾಸಣೆ ನಡೆಸಿದರೆ ಸಿಕ್ಕಿಬೀಳುತ್ತೇವೆ ಎನ್ನುವ ಅನುಮಾನದಲ್ಲಿ ಸ್ವಲ್ಪ ಮುಂದಕ್ಕೆ ತೆರಳಿ ಟಿಪ್ಪರ್‌ ಅನ್ನು ಅಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ. ಪೊಲೀಸರು ಟಿಪ್ಪರ್‌ ಅನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories