ಕಾಸರಗೋಡು: ದೇವಸ್ಥಾನ ಉತ್ಸವ ವೇಳೆ ಪಟಾಕಿ ದುರಂತ, 150ಕ್ಕೂ ಹೆಚ್ಚು ಮಂದಿ ಗಾಯ, 8 ಜನರ ಸ್ಥಿತಿ ಗಂಭೀರ

ಕಾಸರಗೋಡು: ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂಬುದಾಗಿ ವರದಿಯಾಗಿದೆ. ಬೆಂಕಿ ಕಿಡಿಯಿಂದ ಪಟಾಕಿ ಸ್ಪೋಟಗೊಂಡಿದೆ ಎಂಬುದು ತಿಳಿದುಬಂದಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ, ನೀಲೇಶ್ವರ, ಕಾಞಂಗಾಡ್‌ನ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories