ಮಡಿಕೇರಿ ಡಿ.28 : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಹಾಗೂ ಶಿಕ್ಷಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಂದು ಸಾವಿರ ಕೋಟಿ ರೂ. ಸಹಾಯಧನ ಬಿಡುಗಡೆಗೊಳಿಸಬೇಕೆಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಕೊಡಗು ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಚಿನ್ ವಾಸುದೇವ್, ಕೋವಿಡ್ ಪರಿಸ್ಥಿತಿಯ ಸಂಕಷ್ಟದಿಂದಾಗಿ ಕಳೆದ ಹತ್ತು ತಿಂಗಳುಗಳಿಂದ ಖಾಸಗಿ ಶಾಲೆಗಳು ಹಾಗೂ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದಿಂದಾಗಿ ಸಾವಿರಾರು ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಶಿಕ್ಷಣ ಇಲಾಖೆಯನ್ನೇ ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘ ಹಲವು ಬಾರಿ ಮನವಿ ಸಲ್ಲಿಸಿದರೂ ಶಿಕ್ಷಕರ ಸಮಸ್ಯೆಯನ್ನು ಆಲಿಸಲು ಸರ್ಕಾರ ಮುಂದಾಗಿಲ್ಲವೆಂದು ಟೀಕಿಸಿದರು.
ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬ್ಯಾಂಕುಗಳಿಂದ ಖಾಸಗಿ ಶಾಲೆಗಳು ಪಡೆದಿರುವ ಸಾಲದ ಕಂತು ಹಣ ಪಾವತಿಯ ಅವಧಿಯನ್ನು ಒಂದು ವರ್ಷ ಮುಂದೂಡಲು ಬ್ಯಾಂಕ್ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಬೇಕು. 1995 ರಿಂದ 2010ರ ಅವಧಿಯಲ್ಲಿ ಆರಂಭಗೊಂಡ ಅನುದಾನರಹಿತ ಶಾಲೆಗಳನ್ನು ಅನುದಾನಸಹಿತ ಶಾಲೆಗಳನ್ನಾಗಿ ಪರಿವರ್ತಿಸಬೇಕು, ಬೀದರ್ ಜಿಲ್ಲೆಯ 124 ಶಾಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ನವೀಕರಣವನ್ನು ತಕ್ಷಣ ನೀಡಬೇಕು, 2020-21ನೇ ಶೈಕ್ಷಣಿಕ ವರ್ಷಕ್ಕೆ ನೈಸರ್ಗಿಕ ಬೆಳವಣಿಗೆ ಆಧಾರದ ಮೇಲೆ ಅರ್ಜಿ ಸಲ್ಲಿಸಿರುವ ಸಂಸ್ಥೆಗಳಿಗೆ ಪರಿಶೀಲನಾ ಕಾಲಾವಧಿ ಒಂದು ವರ್ಷದವರೆಗೆ ನೀಡಬೇಕು, ಇದೇ ನ.10 ರಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಗೂ, 2009 ಏ.13 ರ ಆದೇಶಕ್ಕೂ ವ್ಯತ್ಯಾಸವಿರುವುದರಿಂದ ಈ ಆದೇಶವನ್ನು ತಕ್ಷಣ ರದ್ದು ಪಡಿಸಿ ಸಂಘ ಮತ್ತು ಸಂಸ್ಥೆಗÀಳೊಂದಿಗೆ ಚರ್ಚಿಸಿ ಹೊಸ ಸುತ್ತೋಲೆಯನ್ನು ಹೊರಡಿಸಬೇಕೆಂದು ಒತ್ತಾಯಿಸಿದರು.
ಐಸಿಎಎಸ್‍ಸಿ ಮತ್ತು ಸಿಬಿಎಸ್‍ಇ ಶಾಲೆಗಳ ರೀತಿಯಲ್ಲಿಯೇ ತಾಲ್ಲೂಕು ಹಂತದಲ್ಲಿ ಅದಾಲತ್ ನಡೆಸಿ ನವೀಕರಿಸಿ ಪ್ರಮಾಣಪತ್ರ ನೀಡಬೇಕು, 2009 ಆರ್‍ಟಿಐ ಕಾಯ್ದೆ 12(1)ಸಿ ಅನ್ನು ಮುಂದುವರೆಸಲು ಕ್ರಮ ಕೈಗೊಳ್ಳಬೇಕು, ಖಾಸಗಿ ಶಾಲೆಗಳಿಗೆ ನೀಡಿರುವ ಆರ್‍ಟಿಇ ಹಣವನ್ನು ಜೂನ್ ತಿಂಗಳಲ್ಲಿ ಒಂದೇ ಕಂತಿನಲ್ಲಿ ಬಿಡುಗಡೆಗೊಳಿಸಬೇಕು, ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ಸಣ್ಣ ಬಡ್ಜೆಟ್ ಶಾಲೆಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು, ಕಲ್ಯಾಣ ಕರ್ನಾಟಕದಲ್ಲಿ 371 ಜೆ ಅಡಿಯಲ್ಲಿ ಮೀಸಲಿರುವ ಅನುದಾನವನ್ನು ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿಗಾಗಿ ವಿಸ್ತರಿಸಿ ಬಿಡುಗಡೆಗೊಳಿಸಬೇಕು, ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುವ ಸೌಲಭ್ಯಗಳು ಖಾಸಗಿ ಶಾಲಾ ನೌಕರರಿಗೂ ಸಿಗುವಂತೆ ಆದೇಶ ಹೊರಡಿಸಬೇಕು, ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಖಾಸಗಿ ಶಿಕ್ಷಕರಿಗೆ ಸಿಗುವಂತೆ ಅವಕಾಶ ಕಲ್ಪಿಸಬೇಕು, ಕೋವಿಡ್ ಕಾರಣ ಪಠ್ಯವನ್ನು ಕಡಿತಗೊಳಿಸಿ ಪಠ್ಯಕ್ರಮ ಹಾಗೂ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತುತ ಇರುವ ಸಮಿತಿಗೆ ನಿವೃತ್ತ ನ್ಯಾಯಾಧೀಶರನ್ನು ಸೇರಿಸಿ ನೂತನ ಸಮಿತಿಯನ್ನು ರಚಿಸಬೇಕೆಂದು ಸಚಿನ್ ವಾಸುದೇವ್ ಆಗ್ರಹಿಸಿದರು.
ಮನವಿ ನೀಡುವ ಸಂದರ್ಭ ಸಂಘದ ಉಪಾಧ್ಯಕ್ಷೆ ಉಮಾಪ್ರಭಾಕರ್, ಶಿರಂಗಾಲ ವಿವೇಕಾನಂದ ಶಾಲೆಯ ಉಪಾಧ್ಯಕ್ಷ ನಟೇಶ್ ಮತ್ತಿತರ ಪ್ರಮುಖರು ಹಾಜರಿದ್ದರು.