ಕೊಡಗು: 10 ದಿನಗಳಲ್ಲಿಯೇ ದರೋಡೆ ಪ್ರಕರಣದ ಆರೋಪಿಗಳ ಬಂಧನ

ಗೋಣಿಕೊಪ್ಪ ಬಳಿ ಡಿಸೆಂಬರ್ 9 ರಂದು ಮಧ್ಯರಾತ್ರಿ ಹೆದ್ದಾರಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಚಿನ್ನಾಭರಣ ವ್ಯಾಪಾರಿ ಶಂಜಾದ್ ಎಂಬಾತನ ಕಾರು ತಡೆದು 61 ಲಕ್ಷದ 71 ಸಾವಿರ ಲೂಟಿ ಮಾಡಲಾಗಿತ್ತು. ಇದೀಗ ಕೃತ್ಯ ಎಸಗಿದ ಹತ್ತು ದಿನದಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಈ ಕುರಿತು ಮಾಹಿತಿ ನೀಡಿ, “ಮೈಸೂರಿನಿಂದ ಶಂಜಾದ್ ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಿ 61 ಲಕ್ಷ ನಗದು ತೆಗೆದುಕೊಂಡು ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸಂದಭ೯ ದರೋಡೆ ಪ್ರಕರಣ ವರದಿಯಾಗಿತ್ತು. ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ತಡೆದು ಕೃತ್ಯ ಎಸಗಲಾಗಿದೆ‌.ಘೋರ ಅಪರಾಧವಾದ ಹಿನ್ನಲೆಯಲ್ಲಿ ನಾನೇ ನೇತೖತ್ವ ವಹಿಸಿದ್ದ ತನಿಖಾ ತಂಡದಲ್ಲಿ 40 ಸಿಬ್ಬಂದಿಗಳಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರ್ ರಾಜ್ ತನಿಖೆ ಕೈಗೊಂಡಿದ್ದರು” ಎಂದರು.

“ಡಿವೈಎಸ್ಪಿಗಳು ಅಪರಾಧ ತನಿಖಾ ದಳ, ಪೊಲೀಸ್ ತಾಂತ್ರಿಕ ಪಡೆಗಳ ನೆರವು ಪಡೆದು ತನಿಖೆ ಮುಂದುವರಿಸಿದ್ದರು. ಆ ರಾತ್ರಿ.. ಆ ದಾರಿಯಲ್ಲಿ ಸಾಗಿದ್ದ ಎಲ್ಲಾ ವಾಹನಗಳನ್ನು ಕೇರಳ ಸೇರಿದಂತೆ ಕೊಡಗಿನ ಹೆದ್ದಾರಿಯಲ್ಲಿನ 300 ಸಿಸಿ ಕ್ಯಾಮರಗಳ ಮೂಲಕ ಪರಿಶೀಲನೆ ನಡೆಸಿ ಕೃತ್ಯ ಬೇಧಿಸಲಾಗಿದೆ”.

ತನಿಖೆಯ ಹಂತದಲ್ಲಿ ಸ್ಥಳೀಯರು ಪ್ರಕರಣದಲ್ಲಿ ಪಾಲ್ಗೊಂಡಿರುವ ಸಂಶಯ ಕಾಡಿತ್ತು. ವಿರಾಜಪೇಟೆಯ ಮಲೆತಿರಿಕೆಯಲ್ಲಿರುವ ನಾಲ್ಕು ಮಂದಿ ಪಾಲ್ಗೊಂಡದ್ದು ಬೆಳಕಿಗೆ ಬಂದಿದೆ.

ಪೆರೂರು ದಿನೇಶ್ – ತ್ರಿಶೂರ್ ಜೈಲಿನಲ್ಲಿ ಕೊಲೆ ಕೇಸ್ ನಲ್ಲಿ ಇದ್ದ ಅಪರಾಧಿ, ಪೆರೋಲ್ ಮೇಲೆ ವಿರಾಜಪೇಟೆಗೆ ಬಂದು ದರೋಡೆಯಲ್ಲಿ ಭಾಗಿಯಾಗಿ ಮತ್ತೆ ಜೈಲಿಗೆ ಹೋಗಿದ್ದಾನೆ. ಗಾಂಜಾ ವ್ಯಾಪಾರಿ ರಮೇಶ್ ಎಂಬಾತನೊಂದಿಗೂ ಜೈಲಿನಿಂದಲೇ ಸಂಪಕ೯ ಸಾಧಿಸಿದ್ದ ಎಂದರು.

ಹಿಂದೂ ಸಂಘಟನೆಯಲ್ಲೂ ದಿನೇಶ್ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಹಿಂದೂ ಸಂಘಟನೆ ಹೆಸರು ಹೇಳಿಕೊಂಡು ಗಾಂಜಾ ಮಾರಾಟದಲ್ಲಿಯೂ ಪಾಲ್ಗೊಂಡಿದ್ದ ದಿನೇಶ್ ರಕ್ಷಣೆ ಪಡೆದಿದ್ದ‌.ಇಂಥವರನ್ನು ಕೂಡಲೇ ಸಂಘಟನೆಯಿಂದ ವಜಾಗೊಳಿಸಿ ಎಂದು ಪೊಲೀಸ್ ವರಿಷ್ಟಾಧಿಕಾರಿ ಕೋರಿಕೊಂಡಿದ್ದಾರೆ.

ಅರ್ಜಿ ಗ್ರಾಮದ ನಾಗೇಶ್ ಆರೋಪಿಗಳಿಗೆ ವಿರಾಜಪೇಟೆಯಲ್ಲಿ ರೂಮ್ ಮಾಡಿಕೊಟ್ಟಿದ್ದರು. ಕ್ಲೀನರ್ ರಮೇಶ್ ಎಂಬಾತನೂ ಪ್ರಕರಣದಲ್ಲಿ ಕಾರ್ ನೀಡುವ ಮೂಲಕ ಭಾಗಿಯಾಗಿದ್ದಾನೆ. ಸ್ಥಳೀಯರಿಂದಲೇ ದರೋಡೆ ಪ್ರಕರಣ ನಡೆದಿದೆ. ಹೀಗಾಗಿಯೇ ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮದ ರಸ್ತೆಯಲ್ಲಿ ದರೋಡೆಯಾಗಿದೆ.

ಜಂಶೇಧ್ ಮತ್ತು ಹರೂನ್ ಎಂಬಿಬ್ಬರು ಕೇರಳ ಮೂಲದವರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದೂರು ನೀಡಿದ್ದ ಶಂಜಾದ್ ಎಂಬ ವ್ಯಾಪಾರಿ ಕೂಡ ಚಿನ್ನಾಭರಣ ವ್ಯವಹಾರದಲ್ಲಿ ಅಕ್ರಮ ವ್ಯವಹಾರ ಮಾಡುತ್ತಿದ್ದರು. 1 ಕೆಜಿ ಯಷ್ಟು ಚಿನ್ನವನ್ನು ಯಾವುದೇ ಬಿಲ್ ಇಲ್ಲದೆ, ತೆರಿಗೆ ಪಾವತಿಸದೇ ಶಂಜಾದ್ ಮಾರಾಟ ಮಾಡಿದ್ದ ಎಂದರು. ಜಿಎಸ್ ಟಿ, ತೆರಿಗೆ ಇಲಾಖೆಯಿಂದಲೂ ಇದೀಗ ದೂರುದಾರನ ವಿರುದ್ದ ತನಿಖೆ ಆರಂಭವಾಗೊದೆ.

ಚಿನ್ನಾಭರಣ ಕೂಡ ವಶಪಡಿಸಿಕೊಂಡು ಈಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಎಸ್ಪಿ ರಾಮರಾಜನ್ ಹೇಳಿಕೆ ನೀಡಿದ್ದಾರೆ.

ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು 10 ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.

ವಿಚಾರಣೆ ಎರಡು ಹಂತದಲ್ಲಿ ನಡೆಯುತ್ತಿದೆ. ಈವರೆಗೆ 6 ಮಂದಿ ಬಂಧಿಸಲಾಗಿದೆ .ಇನ್ನೂ 10 ಆರೋಪಿಗಳು ಭಾಗಿಯಾಗಿರುವ ಶಂಕೆ. ಅವರನ್ನೂ ಶೀಘ್ರದಲ್ಲಿಯೇ ಬಂಧಿಸುವತ್ತೇವೆ ಎಂದರು.

ಕೊಡಗು ಪೊಲೀಸ್ ಈ ಮೊದಲೇ ಹೇಳಿದಂತೆ ಆರೋಪಿಗಳನ್ನು ಪತ್ತೆಮಾಡಿದ್ದೇವೆ. ಪ್ರಕರಣ ನಡೆದ 10 ದಿನಗಳೊಳಗಾಗಿಯೇ ದರೋಡೆಕೋರರನ್ನು ಬಂಧಿಸಿದ್ದೇವೆ. ಇಂಥ ಪ್ರಕರಣ ಯಾರೇ ಮಾಡಿರಲಿ. ಕೊಡಗು ಪೊಲೀಸರು ಇಂಥ ಆರೋಪಿಗಳನ್ನು ಖಂಡಿತಾ ಬಂಧಿಸುತ್ತೇವೆ . ದುಷ್ಕಮಿ೯ಗಳನ್ನು ಜೈಲಿಗೆ ಕಳುಹಿಸಿಯೇ ಸಿದ್ದ ಎಂದು ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಹೇಳಿದರು.

Latest Indian news

Popular Stories