ಮಡಿಕೇರಿ ನ.19 : ರಾಜ್ಯ ಸರ್ಕಾರದ ವಿದ್ಯುತ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೋವಿಡ್‍ನಿಂದಾಗಿ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಜನರನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ ಎಂದು ಟೀಕಿಸಿದರು.
ಬಿಜೆಪಿ ಕುತಂತ್ರ ರಾಜಕಾರಣದ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಹವಣಿಸುತ್ತಿದೆಯೇ ಹೊರತು ಜನಪರ ಕಾಳಜಿ ಹೊಂದಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ಮನೋಭಾವನೆಯನ್ನು ತೋರಿದೆ ಎಂದು ಆರೋಪಿಸಿದರು.
ಸರ್ಕಾರ ತಕ್ಷಣ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಮತ್ತು ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು.
ಹಿರಿಯ ಮುಖಂಡ ಟಿ.ಪಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ನಗರ ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಅಲ್ಪಸಂಖ್ಯಾತರ ಘಕದ ಅಧ್ಯಕ್ಷ ಉಸ್ಮಾನ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ, ಮೂಡಾ ಮಾಜಿ ಅಧ್ಯಕ್ಷ ಬಿ.ಕೆ.ಕೃಷ್ಣ, ಚುಮ್ಮಿದೇವಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ಕಾವೇಮ್ಮ ಸೋಮಣ್ಣ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಾಪಂಡ ರವಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲೀಲ್ ಬಾಷ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ, ವಕ್ಫ್ ಅಧ್ಯಕ್ಷ ಕೆ.ಎ.ಯಾಕುಬ್, ಪ್ರಮುಖರಾದ ಗುಣವಂತ ಬಾಲಂಬಿ, ಕೆ.ಜೆ.ಬಾಬು, ಸದಾನಂದ ಬಂಗೇರ, ನಾಣಯ್ಯ, ವಿ.ಪಿ.ಜಗದೀಶ್, ಕೆ.ಆರ್.ಚಂದ್ರ, ಪ್ರದೀಪ್ ರೈ ಪಂಬಾರು ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.