ಕೊಡಗು : ಬೆಂಬಲ ಬೆಲೆಯಡಿ ಭತ್ತ ಖರೀದಿ : ನ.30 ರಿಂದ ಹೆಸರು ನೋಂದಣಿಗೆ ರೈತರಿಗೆ ಅವಕಾಶ

ಮಡಿಕೇರಿ ನ.13 : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಸಂಬಂಧಿಸಿದಂತೆ ನ.30 ರಿಂದ ಡಿ.30 ರವರೆಗೆ ಕೃಷಿಕರು ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭತ್ತ ಖರೀದಿ ಸಂಬಂಧ ಜಿಲ್ಲಾ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭತ್ತ ಖರೀದಿಯನ್ನು ಕುಶಾಲನಗರದ ಸಹಕಾರ ಮಾರುಕಟ್ಟೆ ಮಹಾ ಮಂಡಳಿ ಕಚೇರಿ, ಮಡಿಕೇರಿ ಮತ್ತು ಗೋಣಿಕೊಪ್ಪ ಎಪಿಎಂಸಿಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಆರ್‍ಟಿಸಿಯಲ್ಲಿ ರೈತರ ಹೆಸರು ಮತ್ತು ಭತ್ತ ಬೆಳೆ ಕಡ್ಡಾಯವಾಗಿ ನಮೂದಾಗಿರಬೇಕು. ಫ್ರೂಟ್ಸ್ ದತ್ತಾಂಶಕ್ಕೆ ಆಧಾರ್ ಜೋಡಣೆಯಾಗಿರಬೇಕು. ಒಂದು ಎಕರೆಗೆ 16 ಕ್ವಿಂಟಾಲ್‍ರಂತೆ ಗರಿಷ್ಠ ಎರಡುವರೆ ಎಕರೆಗೆ 40 ಕ್ವಿಂಟಾಲ್ ಭತ್ತ ಖರೀದಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಫ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಕನಿಷ್ಠ ಬೆಂಬಲ ಯೋಜನೆಯಡಿ ನೋಂದಣಿ ಮಾಡಿದಂತಹ ರೈತರಿಂದ ಭತ್ತವನ್ನು ಖರೀದಿಸಲಾಗುತ್ತದೆ. ಆದ್ದರಿಂದ ಹೆಸರು ನೋಂದಣಿ ಮಾಡಿದ ಕೃಷಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಭತ್ತ ಬೆಳೆದಿರುವ ರೈತರು ಆರ್‍ಟಿಸಿಯಲ್ಲಿ ತಮ್ಮ ಹೆಸರು ಮತ್ತು ಭತ್ತ ಬೆಳೆ ನಮೂದು ಆಗಿರದಿದ್ದಲ್ಲಿ ಸರಿಪಡಿಸಿಕೊಳ್ಳಲು ಕಾಲಾವಕಾಶವಿದ್ದು, ಈಗಲೇ ಸರಿಪಡಿಸಿಕೊಳ್ಳಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಆಹಾರ ಮತ್ತು ಕೃಷಿ ಇಲಾಖೆ ಸಹಕಾರ ನೀಡಲಿದ್ದು, ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡದೆ ರಾಜ್ಯ ಸಹಕಾರ ಮಾರಾಟ ಮಂಡಳಿಯವರು ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕರಾದ ಗೌರವ ಕುಮಾರ್ ಶೆಟ್ಟಿ ಅವರು ಈ ಬಾರಿ ಭತ್ತ ಖರೀದಿಗೆ ಸಂಬಂಧಿಸಿದಂತೆ ರೈತರ ಹೆಸರು ನೋಂದಣಿಯಿಂದ ಹಣ ಪಾವತಿಸುವವರೆಗೆ ಎಲ್ಲಾ ಪ್ರಕ್ರಿಯೆಗಳನ್ನು ಸಹಕಾರ ಮಾರಾಟ ಮಹಾ ಮಂಡಳಕ್ಕೆ ವಹಿಸಲಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದರು.
ಫ್ರೂಟ್ಸ್ ಐಡಿ ಬಗ್ಗೆ ಸಮಸ್ಯೆಗಳಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಬೇಕು. ಭತ್ತ ಖರೀದಿಸಲು ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಏಜೆನ್ಸಿಯಾಗಿ ನೇಮಿಸಿದ್ದು, ಸಾಮನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 1,868 ರೂ. ಗ್ರೇಡ್ ‘ಎ’ ಭತ್ತಕ್ಕೆ 1,888 ರೂ. ನಿಗದಿಪಡಿಸಲಾಗಿದೆ ಎಂದರು.
ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಗ್ರೇಡರ್ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಬೇಕಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.
ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಣಿ ಮಾಲೀಕರು ಈ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸುವಾಗ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಆಪ್ ಲೋಡ್ ಮಾಡಲಾಗುತ್ತದೆ ಎಂದರು.
ಮಾಹಿತಿ ನೀಡಿ ನೋಂದಣಿ ಮಾಡಿದ ರೈತರು ಇಲಾಖೆಯಿಂದ ಕಳುಹಿಸುವ ಎಸ್‍ಎಂಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು ಕಡ್ಡಾಯವಾಗಿ ನೀಡಬೇಕು ಎಂದರು.
ಇತ್ತೀಚೆಗೆ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಅತಿರ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ. ಅತಿರ ಭತ್ತವನ್ನು ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಬಳಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಈ ಸಂಬಂಧ ಚರ್ಚೆಯಾಗಿರುವ ಬಗ್ಗೆ ಜಿ.ಪಂ.ಸಿಇಒ ಅವರ ಮೂಲಕ ಆಹಾರ ಇಲಾಖೆ ಆಯುಕ್ತರಿಗೆ ಮಾಹಿತಿ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಕೃಷಿಕರು ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ ಅಥವಾ ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ಅವರು ಕೋರಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕÀ ಹರೀಶ್ ಅವರು ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ಇತರರು ಹಾಜರಿದ್ದರು.

Latest Indian news

Popular Stories