ಮಡಿಕೇರಿ ಡಿ.15 : ಹಿರಿಯರ ಮೇಲ್ಮನೆಯೆಂದೇ ಗೌರವದ ಸ್ಥಾನವನ್ನು ಹೊಂದಿರುವ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಪ್ರತಿನಿಧಿಗಳು ಅಮಾನುಷವಾಗಿ ವರ್ತಿಸುವ ಮೂಲಕ ರಾಜ್ಯದ ಜನ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ, ಬಿಜೆಪಿ ಅಧಿಕಾರಕ್ಕಾಗಿ ಸಂವಿಧಾನದ ಆಶಯಗಳಿಗೆ ಅಪಚಾರವೆಸಗಿದೆ ಎಂದು ಟೀಕಿಸಿದರು. ವಿಧಾನ ಪರಿಷತ್ ನ ಗೌರವಕ್ಕೆ ದಕ್ಕೆ ತರುವ ಮೂಲಕ ಆ ಪಕ್ಷ ಕರಾಳ ಚರಿತ್ರೆಯನ್ನು ಸೃಷ್ಟಿಸಿದೆ. ನ್ಯಾಯಯುತವಾಗಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಆದರೆ ಸಭಾಪತಿಗಳು ಪ್ರವೇಶ ಮಾಡುವುದನ್ನು ತಡೆಯಲು ಬಿಜೆಪಿ ಮಂದಿ ಬಾಗಿಲನ್ನು ಹಾಕಿ ಉಪಸಭಾಪತಿಗಳನ್ನು ಪೀಠದಲ್ಲಿ ಕೂರಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿಗರು ಬಲಹೀನರಲ್ಲ, ಬಿಜೆಪಿ ವರ್ತನೆ ವಿರುದ್ಧ ಪ್ರತಿರೋಧವನ್ನು ತೋರಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ವೆಂಕಪ್ಪಗೌಡ ಸಮರ್ಥಿಸಿಕೊಂಡರು. ರಾಜ್ಯದ ಜನ ತಲೆತಗ್ಗಿಸುವಂತೆ ಮಾಡಿರುವ ಬಿಜೆಪಿ ಸರ್ಕಾರ ತಕ್ಷಣ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸುವ ಮೂಲಕ ತನ್ನ ಗೌರವವನ್ನು ಉಳಿಸಿಕೊಳ್ಳಲಿ ಎಂದು ಅವರು ಒತ್ತಾಯಿಸಿದರು.
::: ಎಲ್ಲವೂ ಖಾಸಗೀಕರಣ :::
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿರುವುದರಿಂದ ರೈತರು ಹಾಗೂ ಸರ್ಕಾರಿ ನೌಕರರು ಬೀದಿಗೆ ಬಂದಿದ್ದಾರೆ. ಐಎಎಸ್, ಪೊಲೀಸ್ ಮತ್ತು ಸೇನೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಕೇತ್ರಗಳನ್ನು ಖಾಸಗೀಕರಣ ಮಾಡುವ ತಂತ್ರವನ್ನು ಸರ್ಕಾರ ಹೆಣೆದಿದೆ ಎಂದು ವೆಂಕಪ್ಪಗೌಡ ಆರೋಪಿಸಿದರು.
ತನಗಿಷ್ಟ ಬಂದಂತೆ ಕಾನೂನು ರೂಪಿಸಿ ನಿತ್ಯ ತೊಂದರೆ ನೀಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇನ್ನಾದರೂ ಜನರು ಎಚ್ಚೆತ್ತುಕೊಂಡು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗದಲ್ಲಿ ತೊಡಗಿದ್ದು, ಚುನಾವಣೆ ಸಂದರ್ಭ ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿಯನ್ನು ಘೋಷಿಸಿಕೊಳ್ಳುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರ್ಕಾರ ವಿದ್ಯಾರ್ಥಿಗಳಿಗೆ ಅಗತ್ಯ ಅನುಕೂಲವನ್ನು ಕಲ್ಪಿಸದೆ ಆನ್‍ಲೈನ್ ತರಗತಿಗಳನ್ನು ಅವೈಜ್ಞಾನಿಕವಾಗಿ ನಡೆಸಿದೆ. ಕೊಡಗಿನ ಪ್ರವಾಸೋದ್ಯಮಕ್ಕೆ, ರೈತರ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ, ಮಳೆಹಾನಿ ಸಂತ್ರಸ್ತರ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ನೆರವು ದೊರೆತ್ತಿಲ್ಲ. ಜಿಲ್ಲೆಯ ಇಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಕೂಡ ಕೊಡಗಿನ ಸಮಸ್ಯೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಡಾ.ಕಸ್ತೂರಿ ರಂಗನ್ ವರದಿಯನ್ನು ಜಿಲ್ಲೆಯ ಜನರು ವಿರೋಧಿಸುತ್ತಿದ್ದರೂ ದಿವ್ಯ ಮೌನಕ್ಕೆ ಶರಣಾಗುವ ಮೂಲಕ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ವರದಿಯ ಜಾರಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ಜನತೆ ಕನಿಷ್ಠ ಹಸಿವಿನಿಂದ ಪಾರಾಗಿದ್ದಾರೆ ಎಂದು ಮಂಜುನಾಥ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಯು.ಉಸ್ಮಾನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರುರವೀಂದ್ರ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜನ ತೆನ್ನಿರ ಮೈನಾ ಹಾಗೂ ಪ್ರಮುಖರಾದ ಶೈಲೇಶ್ ಉಪಸ್ಥಿತರಿದ್ದರು.