ಕೊಡಗು : ಮತದಾರರ ಪಟ್ಟಿ ಪರಿಷ್ಕರಣೆ : ರಾಜಕೀಯ ಪಕ್ಷಗಳ ಪ್ರಮುಖರ ಅಭಿಪ್ರಾಯ ಪಡೆದ ವೀಕ್ಷಕರು

ಮಡಿಕೇರಿ ಡಿ.5 : ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರ ಅಭಿಪ್ರಾಯವನ್ನು ಮತದಾರರ ಪಟ್ಟಿ ಕೊಡಗು ಜಿಲ್ಲಾ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಶನಿವಾರ ಪಡೆದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಮತದಾರರ ಪಟ್ಟಿ ವೀಕ್ಷಕರು ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದರು.
ಜಿಲ್ಲಾಡಳಿತದಿಂದ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ. ತಹಶೀಲ್ದಾರರು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯ ವೆಬ್‍ಸೈಟ್ www.kodagu.nic.in ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ವಿ.ಅನ್ಬುಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವುದು, ತಿದ್ದುಪಡಿ ಪ್ರಕ್ರಿಯೆಯು ನಿರಂತರವಾಗಿದೆ. ಆದರೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ನಡೆಯುವ ಗ್ರಾ.ಪಂ.ಚುನಾವಣೆಯಲ್ಲಿ ಮತದಾನ ಮಾಡಲು ಡಿಸೆಂಬರ್, 03 ರೊಳಗೆ ನೋಂದಣಿ ಮಾಡಿರಬೇಕು. ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್, 08 ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿರುವವರಿಗೆ ಮತದಾನಕ್ಕೆ ಅವಕಾಶ ಇದೆ ಎಂದು ಅವರು ತಿಳಿಸಿದರು.
ಪೂರಕ ಮತದಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿವಾರು ಒದಗಿಸಲಾಗುವುದು, ಭಾವಚಿತ್ರ ಇರುವ ಮತದಾರರ ಪಟ್ಟಿ ಸಂಬಂಧ ಸಮಸ್ಯೆಗಳು ಇದ್ದಲ್ಲಿ ಗಮನಕ್ಕೆ ತರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರತಿನಿಧಿ ತೆನ್ನಿರ ಮೈನಾ ಅವರು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ ಅಥವಾ ತೆಗೆದು ಹಾಕುವ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು ಎಂದು ಅವರು ಕೋರಿದರು.
ಮತಗಟ್ಟೆವಾರು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮಾಹಿತಿ ನೀಡಿದಾಗ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಮತದಾರರ ಪಟ್ಟಿ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಗ್ರಾ.ಪಂ.ಚುನಾವಣೆ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿ.ಅನ್ಬುಕುಮಾರ್ ಅವರು ಮಾಹಿತಿ ಪಡೆದರು. ಚುನಾವಣಾ ವಿಭಾಗದ ಅನಿಲ್ ಕುಮಾರ್ ಮಾಹಿತಿ ನೀಡಿದರು.
ಭಾರತೀಯ ಜನತಾ ಪಕ್ಷದ ಮನು ಮಂಜುನಾಥ್, ಚುನಾವಣಾ ತಹಶೀಲ್ದಾರ್ ಕುಸುಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಶಿರಸ್ತೇದಾರ್ ಪ್ರಕಾಶ್, ಅನಿಲ್ ಕುಮಾರ್, ವಿರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ, ಇತರರು ಹಾಜರಿದ್ದರು.

Latest Indian news

Popular Stories