ಮಡಿಕೇರಿ ಡಿ.25 : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿರುವ ಹೊಸ್ಕೇರಿ ಗ್ರಾಮದ ನಿವಾಸಿ ಮಂಡೀರ ವಿಮಾಹರೀಶ್ ಡಿವೈಎಸ್‍ಪಿ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಪತಿ ಮಂಡೀರ ಹರೀಶ್ ಹಾಗೂ ಮಾವನವರಿಗೆ ಸೇರಿದ ಹೊಸ್ಕೇರಿಯ ಸಿದ್ದಾಪುರ ರಸ್ತೆಯಲ್ಲಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆಯೇ ಪ್ರಭಾವಿ ರಾಜಕಾರಣಿಯೊಬ್ಬರು ತಮ್ಮ ಸಹೋದರರೊಂದಿಗೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೆ ಕಾನೂನಿಗೆ ವಿರುದ್ಧವಾಗಿ ಕುರುಬ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಕೂಡ ತೋಟದೊಳಗೆ ಬಿಟ್ಟಿದ್ದಾರೆ. ಅಕ್ರಮ ಪ್ರವೇಶ, ರಿವಾಲ್ವರ್ ಹೊಂದಿರುವುದು ಮತ್ತು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ರಾಜಕಾರಣಿಯ ವಿರುದ್ಧ ದೂರು ನೀಡಿದರೂ ಪೊಲೀಸರು ಬಂಧಿಸಿಲ್ಲವೆಂದು ಆರೋಪಿಸಿದರು.
ನಾವು ನೀಡಿದ ದೂರಿಗೆ ಸ್ಪಂದಿಸದ ಪೊಲೀಸ್ ಅಧಿಕಾರಿಗಳು ನನ್ನ ಪತಿಯ ವಿರುದ್ಧ ಕೆಲವರು ಮಾಡಿರುವ ಜಾತಿನಿಂದನೆಯ ಸುಳ್ಳು ಆರೋಪದ ದೂರನ್ನು ಪರಿಗಣಿಸಿ ಸಾರ್ವಜನಿಕವಾಗಿ ಬಂಧಿಸಿದ್ದಾರೆ. ನನ್ನ ಹಾಗೂ ನನ್ನ ತಮ್ಮನ ವಿರುದ್ಧವೂ ಜಾತಿನಿಂದನೆಯ ದೂರು ದಾಖಲಿಸಲಾಗಿದ್ದು, ನಮ್ಮಿಬ್ಬರನ್ನು ಇಲ್ಲಿಯವರೆಗೆ ಬಂಧಿಸಿಲ್ಲ. ಆದರೆ ನನ್ನ ಪತಿ ಹರೀಶ್ ಅವರನ್ನು ಮಾತ್ರ ಬಂಧನಕ್ಕೆ ಒಳಪಡಿಸಲಾಗಿದ್ದು, ಡಿವೈಎಸ್‍ಪಿ ಹಾಗೂ ಠಾಣಾಧಿಕಾರಿಗಳಿಗೆ ಕಾನೂನಿನ ಅರಿವಿನ ಕೊರತೆ ಇದೆ ಎಂದು ವಿಮಾ ಟೀಕಿಸಿದರು.
ಸುಮಾರು ಆರು ಎಕರೆ ಭೂಮಿಗೆ ಸಂಬಂಧಿಸಿದಂತೆ ಮಾವ ಹಾಗೂ ಪತಿಯ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಪ್ರಕರಣ ಇತ್ಯರ್ಥವಾಗುವ ಮೊದಲೇ ಮಾವನವರು ತೋಟವನ್ನು ಗುತ್ತಿಗೆ ಆಧಾರದಲ್ಲಿ ಪ್ರಭಾವಿ ರಾಜಕಾರಣಿಗೆ ನೀಡಿರುವ ಬಗ್ಗೆ ಮಾಹಿತಿ ಇದೆ. ಇದೇ ಕಾರಣಕ್ಕೆ ರಾಜಕಾರಣಿ ಕಾನೂನು ಉಲ್ಲಂಘಿಸಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿರುವುದಲ್ಲದೆ, ಜಾತಿನಿಂದನೆಯ ಕುತಂತ್ರ ಹೂಡುವುದಕ್ಕಾಗಿ ಕುರುಬ ಜನಾಂಗದ ಕಾರ್ಮಿಕರನ್ನು ಬಳಸಿಕೊಂಡಿದ್ದಾರೆ. ತೋಟಕ್ಕೆ ಬಂದ ಕಾರ್ಮಿಕರ ವಿರುದ್ಧ ನಾವುಗಳು ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಒಳ್ಳೆಯ ರೀತಿಯಲ್ಲೇ ವಾಹನವೊಂದರಲ್ಲಿ ವಾಪಾಸ್ ಕಳುಸಿದ್ದೇವೆ. ಆದರೆ ಉದ್ದೇಶಪೂರ್ವಕವಾಗಿ ಇಲ್ಲಸಲ್ಲದ ಆರೋಪ ಮಾಡಿ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪತಿಯ ಬಂಧನವಾಗಿರುವುದರಿಂದ ನಾನು ಹಾಗೂ ಇಬ್ಬರು ಮಕ್ಕಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು ಮತ್ತು ಪ್ರಭಾವಿ ರಾಜಕಾರಣಿಯನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
::: ಮಹಿಳೆ ಪೊಲೀಸ್ ವಶ :::
ತನಗೆ ನ್ಯಾಯ ಬೇಕೆಂದು ಇಬ್ಬರು ಮಕ್ಕಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತ ವಿಮಾ ಅವರನ್ನು ಪೊಲೀಸರು ವಶಕ್ಕೆ ಪಡೆದ ಪ್ರಸಂಗವೂ ನಡೆಯಿತು.