ಮಡಿಕೇರಿ ಡಿ. 8 : ಮೈಸೂರಿನ ಓಡಿಪಿ ಸಂಸ್ಥೆ ವತಿಯಿಂದ ಮಾಲ್ದಾಲೆ ಗ್ರಾಮದ ಕೃ.ಪ ಬ್ಯಾಂಕ್ ಸಭಾಂಗಣದಲ್ಲಿ ರೈತ ಉತ್ಪನ್ನ ಕೂಟದ ಮಹತ್ವದ ಬಗ್ಗೆ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಓಡಿಪಿ ಸಂಸ್ಥೆಯ ಗ್ರಾಮ ವಿಕಾಸ ಒಕ್ಕೂಟ ಹಾಗೂ ರೈತ ಉತ್ಪನ್ನ ಒಕ್ಕೂಟ ಹಾಗೂ ಸಂಯೋಜಕ ಜಾನ್ .ಬಿ. ರಾಡ್ರಿಗಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮೈಸೂರು ಓ.ಡಿ.ಪಿ. ಸಂಸ್ಥೆಯು ಕಳೆದ 35 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಂಸ್ಥೆಯು ಸಮುದಾಯದಲ್ಲಿ ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಜನರು, ಶೋಷಿತರು, ದುರ್ಬಲ ವರ್ಗ ಹಾಗೂ ವಿಶೇಷವಾಗಿ ಮಹಿಳೆಯರ ಸರ್ವತೋಮುಖ, ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ ಹಾಗೂ ರೈತರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಸಂಸ್ಥೆಯು ಪ್ರಸ್ತುತ ರೈತರ ಅಭಿವೃದ್ಧಿಗೆ ರೈತ ಉತ್ಪಾದಕರ ಒಕ್ಕೂಟವನ್ನು ರಚಿಸುವುದರ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದೆ. ಇದಕ್ಕಾಗಿಯೆ 4 ಜಿಲ್ಲೆಯ 150 ಹಳ್ಳಿಗಳಲ್ಲಿ 30 ರೈತ ಕೂಟಗಳನ್ನು ರಚಿಸಲಾಗಿದೆ ಎಂದರು.
ರೈತ ಉತ್ಪನ್ನ ಕುಟದ ಪರಿಕಲ್ಪನೆ ಮತ್ತು ದೇಯ್ಯೋದ್ದೇಶದ ಬಗ್ಗೆ ಮಾಹಿತಿ ನೀಡಿದ ಅವರು, ಸಮುದಾಯದಲ್ಲಿನ ರೈತರಿಗೆ ಸುಸ್ಥಿರ ಬೇಸಾಯ ಪದ್ಧತಿಯ ಬಗ್ಗೆ ಅರಿವು ಮೂಡಿಸಿ ಅವರು ಬೆಳೆದ ಬೆಳೆಗಳ ಶ್ರೇಣಿಕರಣ ಮಾಡಿ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದರ ಮೂಲಕ ರೈತರು ಆರ್ಥಿಕ ಸ್ವಾವಲಂಬನೆ ಪಡೆಯುಬಹುದೆಂದು ವಿವರಿಸಿದರು.
ಪ್ರಸ್ತುತ ರೈತರು ತಾವು ಸಾಲ ಮಾಡಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಇಲ್ಲದೆ, ಮಾಡಿದ ಸಾಲವನ್ನು ತೀರಿಸಲಿಕ್ಕೆ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಓ.ಡಿ.ಪಿ ಸಂಸ್ಥೆಯು ಸರ್ಕಾರಿ – ಸರ್ಕಾರೇತರ ಸಂಘ-ಸಂಸ್ಥೆಗಳೊಂದಿಗೆ ಸೇರಿ ರೈತರನ್ನು ಸಂಘಟಿಸಿ, ಬೆಳೆದ ಉತ್ಪಾನ್ನಗಳಿಗೆ ಉತ್ತಮ ಬೆಲೆಯನು ಒದಗಿಸಲು ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದೆ. ಅಲ್ಲದೆ ಉತ್ತಮ ಬೆಳೆ ತೆಗೆಯಲು ರೈತರು ಮಣ್ಣಿನ ಮತ್ತು ನೀರಿನ ಪರೀಕ್ಷೆ ಮಾಡಿಸಿಕೊಳ್ಳ ಬೇಕು ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು, ರಾಸಾಯನಿಕ ರಸಗೊಬ್ಬರ | ಬಲಕೆ ಕಡಿಮೆ ಮಾಡಬೇಕು. ಇದಕ್ಕೆ ಬೇಕಾದ ತರಬೇತಿಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಸಮುದಾಯದಲ್ಲಿನ ರೈತರಿಗೆ ಸುಸ್ಥಿರ ಬೇಸಾಯ ಪದ್ದತಿಯ ಬಗ್ಗೆ ಅರಿವು ಮೂಡಿಸಿ ಅವರು ಬೆಳೆದ ಬೆಳೆಗಳನ್ನು ಶ್ರೇಣಿಕರಣ ಮಾಡಿ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದರ ಮೂಲಕ ರೈತರು ಆರ್ಥಿಕ ಸ್ವಾವಲಂಬನೆ ಪಡೆಯುವುದು ರೈತ ಉತ್ಪಾದಕರ ಸಂಸ್ಥೆಯ ದೂರದೃಷ್ಟಿ ಎಂದರು.
ಕಾರ್ಯಕ್ರಮದಲ್ಲಿ ಓಡಿಸಿ ಸಂಸ್ಥೆಯ ಕೊಡಗು ಜಿಲ್ಲಾ ಸಂಯೋಜಕರಾದ ಜೊ ಮಿನೇಜೆಸ್, ಕ್ಯಾನ್ಸ್ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮೂವರು ಸದಸ್ಯರಿಗೆ ಕೈತೋಟ ಮಾಡಲು ಬೇಕಾದ ಬಿತ್ತನೆ ತರಕಾರಿ ಬೀಜಗಳನ್ನು ರೈತ ಉತ್ಪನ್ನ ಯೋಜನೆಯ ಮೂಲಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಧನು ಕುಮಾರ್, ಆಶ್ಚರ್ಯ, ವಿಜಯ, ಮಮತ, ಮಹಿಳಾ ಮಹಾ ಒಕ್ಕೂಟದ ಉಷಾ, ಸುಜಾ, ಪುಷ್ಪ, ಪೂವಮ್ಮ ಹಾಗೂ ರೈತರು ಭಾಗವಹಿಸಿದ್ದರು.