ನಾಗಮಂಗಲ ಗಲಭೆ ಪ್ರಕರಣ: ಬಂಧಿತ ಆರೋಪಿಗಳ ಕುಟುಂಬಕ್ಕೆ ಹೆಚ್​ಡಿಕೆ ಆರ್ಥಿಕ ಸಹಾಯ

ಮಂಡ್ಯ, ಸೆಪ್ಟೆಂಬರ್​ 19: ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಗಲಭೆ ಕೇಸ್​ ಸಂಬಂಧಿಸಿದಂತೆ ಇಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಗ್ರಾಮಸ್ಥರ ಅಳಲು ಆಲಿಸಿದ್ದಾರೆ. ಇದೇ ವೇಳೆ‌ ಜೈಲು ಸೇರಿರುವ ವ್ಯಕ್ತಿಗಳ ಕುಟುಂಬಕ್ಕೆ ಮತ್ತು ಪೊಲೀಸರಿಗೆ ಹೆದರಿ ಊರು ಬಿಟ್ಟಿರುವ ಕುಟುಂಬಗಳಿಗೂ ಆರ್ಥಿಕ ಸಹಾಯ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಸದ್ಯಕ್ಕೆ ಕುಟುಂಬ ನಿರ್ವಹಣೆ ಖರ್ಚು ನಾನು ಭರಿಸುತ್ತೇನೆ. ವಾರಕ್ಕೆ ಬೇಕಾದ ಆಹಾರ ಪದಾರ್ಥ ವ್ಯವಸ್ಥೆ ಮಾಡುತ್ತೇನೆ. ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನ ಬಿಡಿಸುತ್ತೇನೆ. ವಕೀಲರನ್ನ ನಾನೇ ನೇಮಿಸಿಕೊಡುತ್ತೇನೆ ಎಂದು ಬಂಧಿತರ ಕುಟುಂಬಗಳಿಗೆ ಮಾತು ಕೊಟ್ಟಿದ್ದಾರೆ.

ಜೈಲಿನ ಮುಂದೆ ಈ ಗ್ರಾಮದ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ಇದನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಹೀಗಾಗಿ ಅವರಿಗೆ ಆರ್ಥಿಕ ಸಹಾಯ ಮಾಡಲು ಬಂದಿದ್ದೇನೆ. ಅಂದಿನ ಗಲಾಟೆಯಲ್ಲಿ ಯಾರ ವೈಫಲ್ಯತೆ ಎಂದು ನಾನು ಹೇಳಲ್ಲ. ಗೃಹ ಸಚಿವರು ಎಚ್ಚರಿಕೆ ವಹಿಸಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದಿದ್ದಾರೆ.

ನನಗೆ ರಾಜಕೀಯಕ್ಕಿಂತ ಜನರ ನೆಮ್ಮದಿ‌ ಮುಖ್ಯ. ಮುಗ್ದ ಜನರನ್ನು ಪೊಲೀಸರು ಬಂದಿಸುವು ಬೇಡ. ಈಗ ಬಂಧಿಸಿರೋರು ಸಾಕು. ಊರು ಬಿಟ್ಟವರಿಗೆ ತೊಂದರೆ ಕೊಡಬೇಡಿ. ಈ ಘಟನೆಯನ್ನು ರಾಜಕೀಯವಾಗಿ ಯಾರು ದುರ್ಬಳಕೆ ಮಾಡಿಕೊಳ್ಳೋದು ಬೇಡ. ನಾನು ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೆ ನಾನು ಬಂದಿಲ್ಲ. ಜನರಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಬಂದಿದ್ದೇನೆ. ಇದರ ಬಗ್ಗೆ ಕೆಲವರು ಮಾತಾಡುತ್ತಾರೆ. ನಾನು 20, 30 ವರ್ಷಗಳಿಂದ ಈ‌ ಕೆಲಸ ಮಾಡುತ್ತಿದ್ದೇನೆ. ನೀವು ಬೇಕಿದ್ದರೆ ಸಹಾಯ ಮಾಡಿ. ದ್ವೇಷ ರಾಜಕೀಯ ಮಾಡುವುದು ಬೇಡ. ಜೈಲಿಗೆ ಹೋಗಿರುವವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಜಾಮೀನು ಕೊಡಿಸುವುದಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಸಂಸದರ ಕೆಲಸ ಏನು? ಆರಾಮವಾಗಿ ಡೆಲ್ಲಿಯಲ್ಲಿ‌ರಬೇಕಾ? ಜನರು ಕಷ್ಟದಲ್ಲಿ ಇರುವಾಗ ಸಂಸದರು ಬರಲೇ ಬೇಕು. ನಾನು ಮಂಡ್ಯ ಸಂಸದ. ನಾನು ಬೆಂಕಿ ಹಚ್ಚಲು‌ ಬಂದಿಲ್ಲ, ರಾಜಕೀಯ ಮಾಡಲು ಬಂದಿಲ್ಲ. ಇದನ್ನ ನೀವು ಅರ್ಥ ಮಾಡಿಕೊಳ್ಳಬೇಕು. ಶೋಭಾ ಕರಂದ್ಲಾಜೆ, ಅಶೋಕ್ ವಿರುದ್ಧ ಎಫ್​ಐಆರ್​ ಹಾಕಿದ್ದಾರೆ. ಗಲಭೆ ಮಾಡಲು ಪೋಸ್ಟ್ ಮಾಡಿದ್ದಾರೆಂದು ಹೇಳುತ್ತಾರೆ. ಇವರ ಎಫ್‌ಐಆರ್ ನೋಡಿದರೆ ನಗು ಬರುತ್ತೆ ಎಂದು ಹೇಳಿದ್ದಾರೆ.

Latest Indian news

Popular Stories