ಉಡುಪಿ: ಗಾಂಜಾ ಪ್ರಕರಣದ ಆರೋಪಿಯೊಬ್ಬ ಮಲ್ಪೆ ಠಾಣೆಯ ಮಹಿಳಾ ಪಿಎಸ್‌ಐ ಸುಷ್ಮಾ ಹಾಗೂ ಹೋಂಗಾರ್ಡ್ ಸಿಬಂದಿ ಜಾವೇದ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಪಿಎಸ್‌ಐ ಹಾಗೂ ಹೋಂ ಗಾರ್ಡ್ ಸಿಬಂದಿ ಅವರು ಶನಿವಾರ ರಾತ್ರಿ 11 ಗಂಟೆಗೆ ಇಲಾಖೆಯ ವಾಹನದಲ್ಲಿ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದರು.
ತೊಟ್ಟಂ, ಗುಜ್ಜರಬೆಟ್ಟು, ಕದಿಕೆ, ಬಡಾನಿಡಿಯೂರು ಮುಂತಾದ ಕಡೆ ಸಂಚರಿಸಿಕೊಂಡು ರಾತ್ರಿ ಸುಮಾರು 2.15ರ ವೇಳೆಗೆ ಹೂಡೆ ತಲುಪಿದಾಗ ಹೂಡೆಯ ಶಾಲೆಗುಡ್ಡೆಯ ಬಳಿ 4-5 ಜನರು ದೊಡ್ಡದಾಗಿ ಅವಾಚ್ಯ ಶಬ್ದಗಳಿಂದ
ಬೈಯ್ದಾಡಿಕೊಳ್ಳುತ್ತಿದ್ದರು. ಪೊಲೀಸರನ್ನು ನೋಡಿದ ಕೂಡಲೇ 2-3 ಮಂದಿ ಓಡಿ ಹೋದರು. ಉಳಿದ ಇಬ್ಬರು ಪೊಲೀಸ್ ಜೀಪಿನ ಬಳಿ ತಮ್ಮ ಇಲಾಖಾ ಜೀಪಿನ ಬಳಿ ಬಂದು “ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.
ಬಳಿಕ ಆತ ಇನ್ನೋರ್ವ ವ್ಯಕ್ತಿಯ ಜತೆ ಸೇರಿಕೊಂಡು ಕೈಯಲ್ಲಿ ದೊಡ್ಡ ಶಿಲೆ ಕಲ್ಲು ಹಾಗೂ ರಾಡ್ ತೆಗೆದುಕೊಂಡು ಬಂದು “ನಿಮ್ಮನ್ನು ಸಾಯಿಸಿ ಬಿಡುತ್ತೇನೆ’ ಎಂದು ಹೇಳುತ್ತಾ ಇಲಾಖೆಯ ಜೀಪಿನ ಹತ್ತಿರಕ್ಕೆ ಬಂದು ಅಡ್ಡಗಟ್ಟಿ ಕೈಯಿಂದ ಜೀಪಿನ ಗ್ಲಾಸಿಗೆ ಹೊಡೆದಿದ್ದಾನೆ. ಬಳಿಕ ಮಹಿಳಾ ಪಿಎಸ್‌ಐ ಅವರ ಮೇಲೆ ಹೊಡೆಯಲು ಶಿಲೆಕಲ್ಲನ್ನು ಬೀಸಿದಾಗ ಕಲ್ಲು ಜೀಪಿನ ಗ್ಲಾಸಿಗೆ (ಮುಂಭಾಗಕ್ಕೆ) ಬಡಿದು ಜೀಪಿನ ಗ್ಲಾಸಿಗೆ ಡ್ಯಾಮೇಜ್ ಉಂಟಾಗಿದೆ. ಬಳಿಕ ಆತ ಇನ್ನೊಂದು ಕಲ್ಲು ಬೀಸಿದ್ದು, ಈ ವೇಳೆ ಪಿಎಸ್‌ಐ ಹಾಗೂ ಹೋಂಗಾರ್ಡ್ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.