ನಮ್ಮದು ಈಸ್ಟ್‌ ಇಂಡಿಯಾ ಕಂಪೆನಿ ವ್ಯವಸ್ಥೆ ಅಲ್ಲ; ನೌಕರರು ಸರ್ಕಾರದ ಗುಲಾಮರಲ್ಲ: ಹೈಕೋರ್ಟ್‌

ಬೆಂಗಳೂರು: ಭ್ರಷ್ಟಾಚಾರ ಆರೋಪ ಸಂಬಂಧ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಾಗ ಪಾರದರ್ಶಕ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ವ್ಯವಸ್ಥೆ ಈಸ್ಟ್‌ ಇಂಡಿಯಾ ಕಂಪೆನಿಯ ವ್ಯವಸ್ಥೆ ಅಲ್ಲ; ನೌಕರರು ಸರ್ಕಾರಗಳ ಗುಲಾಮರಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಖಾತಾ ಬದಲಾವಣೆ ಮಾಡಿಕೊಡಲು 500 ರೂಪಾಯಿ ಲಂಚ ಪಡೆದ ಆರೋಪದಲ್ಲಿ ಲೋಕಾಯುಕ್ತ ನ್ಯಾಯಾಲಯದಿಂದ ಖುಲಾಸೆಯಾದ ಹೊರತಾಗಿಯೂ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಿ ವಿ ರುದ್ರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವ ಏಕಸದಸ್ಯ ಪೀಠವು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರ ರುದ್ರಪ್ಪ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ ನಿವೃತ್ತಿಯವರೆಗೆ ನೀಡಬೇಕಾದ ವೇತನ, ನಿವೃತ್ತಿ ನಂತರದ ಪಿಂಚಣಿ ಸೇರಿದಂತೆ ಕಾನೂನುಬದ್ಧವಾದ ಎಲ್ಲ ಸೇವಾ ಸೌಲಭ್ಯಗಳನ್ನೂ ಒದಗಿಸುವಂತೆ ಸರ್ಕಾರಕ್ಕೆ ಇದೇ ವೇಳೆ ಆದೇಶಿಸಿದೆ.

ಇದಕ್ಕೂ ಮುನ್ನ, ಲಂಚ ಪ್ರಕರಣದಲ್ಲಿ ಅರ್ಜಿದಾರರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದರೂ ಅದೇ ಆರೋಪದ ಮೇಲೆ ಇಲಾಖೆಯಲ್ಲಿ ವಿಚಾರಣೆಯಲ್ಲಿ ದೋಷಿಯಾಗಿ ತೀರ್ಮಾನಿಸಿ, ಸೇವೆಯಿಂದ ವಜಾಗೊಳಿಸಿದ ಸರ್ಕಾರವನ್ನು ಪೀಠ ತರಾಟೆಗೆ ತೆಗೆದುಕೊಂಡಿತು.

Latest Indian news

Popular Stories