ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ನೀವು ಹೇಳಿದಷ್ಟು ಸ್ಥಾನಗಳನ್ನು ಪಡೆಯದಿದ್ದರೆ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸುತ್ತೀರಾ ಎಂದು ಪ್ರಶ್ನಿಸಿದೆ.
ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಮಾಡಿರುವ ಟೀಕೆಗಳನ್ನು ವಿರೋಧ ಪಕ್ಷವು ಕಟುವಾಗಿ ಟೀಕಿಸಿದ್ದು ಪ್ರಧಾನಿ ಮೋದಿ ಹೇಳಿಕೊಂಡಿರುವ ಸ್ಥಾನಗಳ ಅರ್ಧದಷ್ಟು ಸ್ಥಾನವನ್ನು ಪಡೆಯದಿದ್ದರೆ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸುತ್ತೀರಾ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಪ್ರಧಾನಿ ಮೋದಿಗೆ ನಿದ್ದೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾನು ಮೋದಿಜಿಯನ್ನು ಕೇಳಲು ಬಯಸುತ್ತೇನೆ. ನಿಮ್ಮ ಪಕ್ಷದಿಂದ ಅಥವಾ ನಿಮ್ಮ ರಾಜಕೀಯ ವಂಶಸ್ಥರು ದೇಶದ ಸ್ವಾತಂತ್ರ್ಯ, ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆಯೇ ಎಂದು ಖರ್ಗೆ ‘ಎಕ್ಸ್’ ಪೋಸ್ಟ್‌ನಲ್ಲಿ ಕೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಾನೂ ಒಬಿಸಿ ಎಂದು ಪ್ರಧಾನಿ ಮೋದಿ ಹೆಮ್ಮೆಪಡುತ್ತಾರೆ. ಆದರೆ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಕಡಿಮೆ ಇದೆ. ಮೋದಿ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಬೇಡಿಕೆಯನ್ನು ತಳ್ಳಿಹಾಕಿದರು. ಅದು ಎಲ್ಲಾ ಸಂಸ್ಥೆಗಳಲ್ಲಿ ಈ ಕಡಿಮೆ ಪ್ರಾತಿನಿಧ್ಯದ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು.
ಪ್ರಧಾನಿ ಸಾಮಾಜಿಕ ನ್ಯಾಯದ ವಿಚಾರವನ್ನು ಏಕೆ ತಿರಸ್ಕರಿಸುತ್ತಿದ್ದಾರೆ, ಅವಹೇಳನಕಾರಿಯಾಗಿದ್ದಾರೆ? ಸತ್ಯ ಹೇಳಬೇಕೆಂದರೆ ಆರ್‌ಎಸ್‌ಎಸ್‌ನ ಜಾತಿವಾದಿ ಮನಸ್ಥಿತಿಯಲ್ಲಿ ತರಬೇತಿ ಪಡೆದವರು ಎಂದಿಗೂ ಅರ್ಥಪೂರ್ಣ ಸಾಮಾಜಿಕ ನ್ಯಾಯವನ್ನು ನೀಡಲು ಸಾಧ್ಯವಿಲ್ಲ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಪ್ರಧಾನಿಯಾಗಿ ಸಂಸತ್ತಿನಲ್ಲಿ ಮೋದಿಜಿ ಅವರ ಕೊನೆಯ ಭಾಷಣ ಇದು ಎಂದು ದೇಶದ ಯುವಕರು ಹೇಳುತ್ತಿದ್ದಾರೆ. #ByeByeModi ನಂಬರ್ 1 ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಜನರು ಈಗ ನಿಮ್ಮ ಹೇಳಿಕೆಗಳನ್ನು ಕೇಳಲು ಬೇಸತ್ತಿದ್ದಾರೆ. ‘ಮೋದಾನಿ’ ಯುಗವು ಕೊನೆಗೊಳ್ಳಲಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.