ಕಾರವಾರ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ , ಜಿಲ್ಲೆಯಲ್ಲಿ ಮುಕ್ತ , ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು , ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ತಂಡಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕಸಭಾ ಚುನಾವಣೆ-2024ರ ಸಂಬಂಧಿಸಿಂತೆ ಚುನಾವಣಾ ಕರ್ತವ್ಯ ನಿರ್ವಹಿಸಲು ಈಗಾಗಲೇ , ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಧಿಕಾರಿಗಳ ತಂಡ, ಫ್ಲೈಯಿಂಗ್ಸ್ಕ್ವಾ,ಡ್ , ವೀಕ್ಷಣಾ ತಂಡ, ಎಂಸಿಎಂಸಿ ತಂಡ, ಲೆಕ್ಕಪರಿಶೀಲನಾ ತಂಡ, ದೂರು ನಿರ್ವಹಣಾ ತಂಡ, ನಗದು ವಶ ಪರಿಶೀಲಾ ತಂಡ, ಸಹಾಯಕ ವೆಚ್ಚ ವೀಕ್ಷಕ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು, ಅದರಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಿಗೆ 95 ಲಕ್ಷ ವೆಚ್ಚದ ಮಿತಿ ಇದ್ದು, ಈ ಕುರಿತಂತೆ ಅಭ್ಯರ್ಥಿಯ ಖಚ್ಚು ವೆಚ್ಚದ ವಿವರಗಳನ್ನು , ಈಗಾಗಲೇ ಚುನಾವಣಾ ಆಯೋಗ ನೀಡಿರುವ ಪ್ರತಿಯೊಂದು ವಸ್ತು ಮತ್ತು ಸೇವೆಗಳ ಕುರಿತು ನಿಗಧಿಪಡಿಸಿರುವ ವೆಚ್ಚದ ವಿವರಗಳೊಂದಿಗೆ ತಾಳೆ ಮಾಡಿ, ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಲೆಕ್ಕ ಪರಿಶೀಲನಾ ತಂಡದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಂಸಿಎಂಸಿ ತಂಡದ ಸದಸ್ಯರು ಪತ್ರಿಕೆಗಳಲ್ಲಿ ಪ್ರಕಟವಾಗುವ ಪೇಯ್ಡ್ ನ್ಯೂಸ್ ಗಳ ಮೇಲೆ ನಿಗಾ ಇರಿಸುವಂತೆ ತಿಳಿಸಿದ ಅವರು, ಯಾವುದೇ ಅಭ್ಯರ್ಥಿಗಳು ಸೂಕ್ತ ಅನುಮತಿ ಪಡೆಯದೇ ಪತ್ರಿಕೆಗಳಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಜಾಹೀರಾತು ಪ್ರಕಟಿಸಲು ಅವಕಾಶವಿಲ್ಲವಾಗಿದ್ದು ಇಂತಹ ಜಾಹೀರಾತುಗಳ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದರು.
ತರಬೇತಿಯ ಅವಧಿಯಲ್ಲಿ ತಮ್ಮ ಸಮಸ್ಯೆ ಮತ್ತು ಗೊಂದಲಗಳನ್ನು ಬಗೆಹರಿಸಿಕೊಂಡು, ಯಾವುದೇ ಒತ್ತಡಗಳಿಗೆ ಒಳಗಾಗದೇ ,ಚುನಾವಣಾ ಆಯೋಗವು ತಮಗೆ ನೀಡಿರುವ ಅಧಿಕಾರಗಳನ್ನು ಚಲಾಯಿಸಿ , ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
ಸಭೆಯಲ್ಲಿಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಲಗದ, ಸ್ಟೆಲ್ಲಾ ವರ್ಗಿಸ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಆನಂದ್, ಜಿಲ್ಲಾ ತರಬೇತಿ ನೋಡೆಲ್ ಅಧಿಕಾರಿ ಸೋಮಶೇಖರ್ ಮೇಸ್ತ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ತಂಡಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.ಮಾಸ್ಟರ್ ಟ್ರೇನರ್ ದಿನೇಶ್ ಶೇಟ್ ತರಬೇತಿ ನೀಡಿದರು.
…….