ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾನೂನು ಜಾರಿ ನಿಶ್ಚಿತ:- ಬೊಮ್ಮಾಯಿ

ಮಂಗಳೂರು/ಮಣಿಪಾಲ,ಡಿ.3(ಯುಎನ್‌ಐ):- ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾನೂನು ಜಾರಿ ಮಾಡುವುದು ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲಹಾಬಾದ್ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ, ಹರಿಯಾಣದಲ್ಲಿ ಕಾನೂನು ಅಧ್ಯಯನ ಮಾಡಿ ಇನ್ನಷ್ಟು ಅಂಶಗಳನ್ನು ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಉತ್ತರ ಪ್ರದೇಶ ಸರ್ಕಾರ ಈಚೆಗೆ ಲವ್ ಜಿಹಾದ್ ಕಾನೂನು ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ್ದು ಅದರ ಪ್ರತಿಯನ್ನು ಪಡೆದು ಪರಿಶೀಲಿಸಿ ಯಾವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಬೇಕು ಎಂದು ಚರ್ಚಿಸಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದು ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದರು.
ಮೊಘಲರ ಕಾಲದಿಂದಲೂ ಲವ್ ಜಿಹಾದ್ ಇದೆ ಎಂದು ಹೇಳಿರುವ ಸಿದ್ದರಾಮಯ್ಯ ಇನ್ನೂ ಮೊಘಲರ ಕಾಲದಲ್ಲಿಯೇ ಇದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿ. 5 ರಂದು ಬಂದ್ ನಡೆಸುವುದು ಸುಪ್ರೀಂ ಆದೇಶದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಂದ್ ಹಿಂಪಡೆಯಲು ಮನವಿ ಮಾಡಿದ್ದೇವೆ. ಆದಾಗ್ಯೂ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉನ್ನತ ಸಮಿತಿ ನೀಡಿದ ವರದಿ ಆಧಾರದಲ್ಲಿ ರಾತ್ರಿ ಕಪ್ರ್ಯೂ ಹೊರತಾಗಿ ಅನ್ಯ ಅಂಶಗಳ ಜಾರಿಗೆ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ನಿಯಂತ್ರಣದತ್ತ ಗಮನ ಹರಿಸಲಾಗುವುದು. ಹೊಸ ವರ್ಷದ ನಂತರ ಶಾಲೆಗಳ ಆರಂಭ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಈ ನಡುವೆ ಶಿಕ್ಷಣ ಸಚಿವರು ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎಂದರು.
ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಮೂಲ, ವಲಸಿಗ ಎನ್ನುವ ತಿಕ್ಕಾಟ, ಗೊಂದಲವಿಲ್ಲ. ಜಿಲ್ಲಾಡಳಿತದಿಂದ ಗೌರವ ವಂದನೆ ಸಲ್ಲಿಸಲಾಯಿತು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ, ಎಸ್ಪಿ ಎನ್.ವಿಷ್ಣುವರ್ಧನ, ಜಿ.ಪಂ.ಸಿಇಒ ಡಾ.ನವೀನ್ ಭಟ್ ಉಪಸ್ಥಿತರಿದ್ದರು.
ನಂತರ ಮಂಗಳೂರಿನಲ್ಲಿ ಮಂಗಳೂರು ಉತ್ತರ ಉಪವಿಭಾಗದ ಪಣಂಬೂರಿನಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಗೃಹಗಳ ಸಂಕಿಣ9 ಉದ್ಘಾಟಿಸಿದರು.
ಬಳಿಕ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಮಂಗಳೂರಿನಲ್ಲಿ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹ ಪ್ರಕರಣದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಚರ್ಚೆ ನಡೆಯುತ್ತಿದೆ. ಹೆಚ್ಚೆಚ್ಚು ಗಲಭೆ, ಉಗ್ರರ ಕೃತ್ಯಗಳು ನಡೆಯುವ ಪ್ರದೇಶಗಳಲ್ಲಿ ಈ ರೀತಿ ಗೋಡೆ ಬರಹ ಬರೆಯಲಾಗುತ್ತಿದೆ. ಕಾಶ್ಮೀರ, ಇರಾಕ್, ಇರಾನ್ ನಲ್ಲೂ ಈ ರೀತಿ ಗೋಡೆ ಬರಹ ಬರೆಯಲಾಗಿತ್ತು. ಉಗ್ರರು ತಮ್ಮ ಕೃತ್ಯ ಮಾಡುವ ಮೊದಲು ಈ ರೀತಿ ಬರೆಯುತ್ತಾರೆ. ಇದೇ ರೀತಿಯ ಸಣ್ಣ ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ ಎಂದರು.
ಈಗಾಗಲೇ ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ಮಾಡುತ್ತಿದ್ದು, ಅತೀ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.

Latest Indian news

Popular Stories