ತ್ರೈಮಾಸಿಕ ಕೆಡಿಪಿ ಸಭೆ :ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ : ಅಧಿಕಾರಿ ವರ್ಗಕ್ಕೆ ಕಡಕ್ ಸೂಚನೆ ನೀಡಿದ ಶಾಸಕ ಭೀಮಣ್ಣ ನಾಯ್ಕ

ಕಾರವಾರ : ಅಧಿಕಾರಿಗಳು ಇಲಾಖೆಯ ಸಮಗ್ರ ಮಾಹಿತಿಯೊಂದಿಗೆ ಸಭೆಗಳಿಗೆ ಹಾಜರಾಗಬೇಕು ಮಾಹಿತಿ ಇಲ್ಲದೆ ಸಭೆಗೆ ಹಾಜರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಶಿರಸಿ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದಿಂದ ಬಿಡುಗಡೆಯಾದ ಕಾಮಗಾರಿಗಳನ್ನು ಶೀಘ್ರವೇ ಕಾಮಗಾರಿ ಆರಂಭಿಸಿ ಪ್ರಗತಿಯಾಗಬೇಕು. ಅಭಿವೃದ್ಧಿಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಆರೋಗ್ಯ ಇಲಾಖೆ ವತಿಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಐಸಿಯು ಗೆ ಅವಶ್ಯಕವಿರುವ ಸಲಕರಣೆ ಶೀಘ್ರವೇ ಪಡೆಯಬೇಕು. ಸಾರ್ವಜನಿಕರಿಗೆ ಚಿಕಿತ್ಸೆಗೆ ಯಾವುದೇ ಕುಂದು ಕೊರತೆಗಳಾಗದಂತೆ ನಿಗಾ ವಹಿಸಬೇಕು ಎಂದರು.
ತೋಟಗಾರಿಕೆಯಲ್ಲಿ ಕೈಗೊಂಡ ಹೊಸ ಬೆಳೆಗಳ ಕುರಿತು ಮಾಹಿತಿ ಪಡೆದ ಶಾಸಕರು, ಕಾಫಿ ಬೆಳೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಬೇಕು. ವೆನಿಲ್ಲಾ, ಕಾಳು ಮೆಣಸು, ಜೇನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಸಿಸಿ ಟಿವಿ ಕ್ಯಾಮರಾ ಸರಿಪಡಿಸಿ :

ಲೋಕೋಪಯೋಗಿ ಹಾಗೂ ನಗರಸಭೆ ವತಿಯಿಂದ ಚರಂಡಿ, ಶೌಚಾಲಯ, ನೀರಿನ ಟ್ಯಾಂಕಗಳ ನಿರ್ವಹಣೆ ಮಾಡಬೇಕು ನಗರದಲ್ಲಿನ ಸಿಸಿ ಟಿವಿ ಕ್ಯಾಮೆರಾಗಳ ನಿರ್ವಹಣೆಯಾಗುತ್ತಿಲ್ಲ , ಅವುಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು. ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ನಿಲ್ದಾಣಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿದ್ದಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಯಾಗಬೇಕು. ಸಾರ್ವಜನಿಕ ಸೇವೆಗೆ ಸಾರಿಗೆ ಸಂಸ್ಥೆ ಸದಾ ಸ್ಪಂದಿಸಬೇಕು ಎಂದು ಸೂಚಿಸಿದರು.

ಮಳೆಗಾಲ ಆರಂಭವಾಗಿದ್ದು, ಗ್ರಾಮ ಪಂಚಾಯತ್‌ಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡು, ರಸ್ತೆ, ಚರಂಡಿ ಸರಿಪಡಿಸಿ ಆರೋಗ್ಯಕ್ಕೆ ಸಂಬಂಧಸಿದ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಅವಶ್ಯಕವಿರುವ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಜನ ಸಾಮಾನ್ಯರು ಪಂಚಾಯತ್‌ಗೆ ಬಂದಾಗ ಅವರಿಗೆ ಸ್ಪಂದನೆ ಮಾಡಬೇಕು. ನೀರಿನ ಸಮಸ್ಯೆ ಬಾರದಂತೆ ಜಾಗೃತಿ ವಹಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಕಾಲದಲ್ಲಿ ಲಭ್ಯವಿದ್ದು ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಪಂಚಾಯತ್ ನಿರ್ವಹಣೆ ಉತ್ತಮವಾಗಿರಬೇಕು ಎಂದರು.

ಸಭೆಯಲ್ಲಿ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ, , ತಹಸೀಲ್ದಾರ್ ರಮೇಶ್ ಹೆಗಡೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾ ಉಗ್ರಾಣಿಕರ್, ತಾ.ಪಂ ವ್ಯವಸ್ಥಾಪಕ ಸುಬ್ರಾಯ್ ಭಟ್ ಹಾಗೂ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
……

Latest Indian news

Popular Stories