ರಾಯಚೂರು: ಜಿಲ್ಲೆಯಲ್ಲಿ ಕೋಳಿ ಜ್ವರವಿಲ್ಲ: ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ-ಸಂತೋಷ್ ಕಾಮಗೌಡ

ರಾಯಚೂರು,ಜ.12:- ಜಿಲ್ಲೆಯಲ್ಲಿ ಯಾವುದೇ ರೀತಿಯ ಹಕ್ಕಿ ಹಾಗೂ ಕೋಳಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದಿಲ್ಲ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರು ಭರವಸೆ ವ್ಯಕ್ತ ಪಡಿಸಿದರು.
ಅವರು ಜ.12ರ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕರ ಕುರಿತು ಮುಂಜಾಗ್ರತಾ ವಹಿಸಲು ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹಕ್ಕಿ, ಕೋಳಿ ಜ್ವರ ಪ್ರಕರಣಗಳು ಇದೂವರೆಗೆ ವರದಿಯಾಗಿಲ್ಲ, ಇನ್ನು ಮುಂದೆಯೂ ಅದು ಹರಡದಂತೆ ಎಚ್ಚರಿಕೆ ವಹಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಈ ದಿಸೆಯಲ್ಲಿ ಅಸ್ವಾಭಾವಿಕವಾಗಿ ಕೋಳಿಗಳು, ಪಕ್ಷಿಗಳು ಮರಣ ಹೊಂದಿದ್ದಲ್ಲಿ ಹೆಚ್ಚಿನ ಗಮನ ಹರಿಸಿ ವರದಿ ನೀಡಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಎಲ್ಲ ರೀತಿಯ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಪಶುಪಾಲನಾ ಮತ್ತ ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಣ್ಣ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೇರಳದ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರ, ಹಕ್ಕಿ ಜ್ವರ ರೋಗೋದ್ರೇಕವು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಳಿ ಶೀತ ಜ್ವರದ ನಿಯಂತ್ರಣ ಮತ್ತು ನಿರ್ವಹಣೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಕೇಂದ್ರ ಸರ್ಕಾರದ ಕೋಳಿ ಶೀತ ಜ್ವರ ನಿಯಂತ್ರಣ ಹಾಗೂ ನಿರ್ವಹಣೆ ಮಾರ್ಗಸೂಚಿಗಳನ್ವಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ದರಾಗಬೇಕು, ಅದಕ್ಕಾಗಿ ಅಗತ್ಯ ಪರಿಕರಗÀಳು ಹಾಗೂ ಔಷಧಗಳನ್ನು ಸಂಗ್ರಹಿಸಬೇಕು, ಜಿಲ್ಲಾ ಮಟ್ಟದ ಕ್ಷಿಪ್ರ ಕಾರ್ಯಚರಣೆ ತಂಡಗಳನ್ನು ರಚಿಸಿ, ಸನ್ನದ್ಧರಾಗಬೇಕು ಎಂದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಕೋಳಿ ಶೀತ ಜ್ವರ, ಹಕ್ಕಿಜ್ವರ ರೋಗಗಳು ಪತ್ತೆಯಾಗದಂತೆ ಈಗಾಗಲೇ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ. ರಾಯಚೂರು ತಾಲೂಕಿನ ನಾಲ್ಕು ಕಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಗಿಲ್ಲೆಸುಗೂರು, ದೇವಸೂಗೂರು, ಯರಗೇರಾ ಹಾಗೂ ಸಿಂಗನೋಡಿ ಗ್ರಾಮದಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಕೋಳಿ ಸಾಗಾಣಿಕೆ ಮಾಡುವವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದರು.
ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಕೋಳಿ, ಮೊಟ್ಟೆ ಬೆಯಿಸಿ ಸೇವಿಸಬೇಕು. ಅದನ್ನು ಸೇವಿಸುವದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ, ಸಾರಿಗೆ ಇಲಾಖೆಯ ಅಧಿಕಾರಿ ವಿಶಾಲ್ ಪವಾರ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ತಾಲೂಕು ಸಹಾಯಕ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories