ಶ್ರೀರಂಗಪಟ್ಟಣ ಮಸೀದಿಯಲ್ಲಿ ಮದರಸಾ ತೊರವುಗೊಳಿಸಿ: ಕೇಂದ್ರ ಸರ್ಕಾರದಿಂದ ಹೈಕೋರ್ಟ್‌ಗೆ ಮನವಿ

ಬೆಂಗಳೂರು: ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯಲ್ಲಿರುವ ಮದರಸಾ ತೆರವಿಗೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸರ್ಕಾರ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಚಟುವಟಿಕೆ ನಡೆಯುತ್ತಿರುವುದನ್ನು ಪ್ರಶ್ನಿಸಿ ಕನಕಪುರ ತಾಲೂಕು ಕಬ್ಬಾಳುವಿನ ಅಭಿಷೇಕ್ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿ 1951ರಲ್ಲಿಯೇ ಜುಮ್ಮಾ ಮಸೀದಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಆದರೆ ಅಲ್ಲಿ ಕಾನೂನುಬಾಹಿರ ಮದರಸಾ ಚಟುವಟಿಕೆ ನಡೆಯುತ್ತಿದೆ. ಈ ಚಟುವಟಿಕೆ ನಿರ್ಬಂಧ ವಿಧಿಸಿದರೆ ಸಮಸ್ಯೆಗೆ ದಾರಿ ಮಾಡಿಕೊಡಲಿದೆ ಎಂದು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಹಾಗಾಗಿ ಮಸೀದಿಯಲ್ಲಿ ಮದರಸಾವನ್ನು ತೆರವು ಮಾಡಲು ಜಿಲ್ಲಾಧಿಕಾರಿಗೆ ಅಗತ್ಯ ನಿರ್ದೇಶನವನ್ನು ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಆದರೆ, ಕೇಂದ್ರ ಸರ್ಕಾರದ ಪರ ವಕೀಲರು ಮನವಿ ಮಾಡುತ್ತಿದಂತೆ ರಾಜ್ಯ ಸರ್ಕಾರ ಮತ್ತು ವಕ್ಫ್ ಬೋರ್ಡ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, 1963ರಲ್ಲಿಯೇ ಆ ಮಸೀದಿಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಟಿಪ್ಪು ಸುಲ್ತಾನ್ ಷಹೀದ್ ವಕ್ಫ್ ಎಂದು ಘೋಷಿಸಲಾಗಿದೆ. ಅದರಂತೆ ವಕ್ಫ್ ಬೋರ್ಡ್ ಆಸ್ತಿಯಲ್ಲಿ ಮದರಸಾ ಚಟುವಟಿಕೆಗೆ ಅವಕಾಶವಿದೆ ಎಂದು ವಾದಿಸಿದರು
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನ.20 ಕ್ಕೆ ಮುಂದೂಡಿತು.