22ನೇ ವಯಸ್ಸಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್
- ತನ್ನ ಜೀವನದಲ್ಲಿ ಉಂಟಾದ ಕಹಿ ಘಟನೆಗಳನ್ನು ಮೆಟ್ಟಿ ನಿಂತು 22ನೇ ವಯಸ್ಸಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್ ಅವರ ಯಶೋಗಾಥೆ ಇದು.
- ಸಫಿನ್ ಹಸನ್ ಅವರು ಮೂಲತಃ ಗುಜರಾತ್ ನ ಪಾಲನ್ ಪುರಿಯ ಕನೋದರ್ ಗ್ರಾಮದವರು. ಅವರು 1995ರಲ್ಲಿ ಮುಸ್ತಾಫಾ ಹಾಗೂ ನಸೀಮ ಎಂಬ ದಂಪತಿಯ ಪುತ್ರನಾಗಿ ಜನಿಸುತ್ತಾರೆ. ಕನೋದರ್ ಗ್ರಾಮದಲ್ಲಿಯೇ ತನ್ನ ಶಾಲಾ ಶಿಕ್ಷಣವನ್ನು ಅವರು ಪೂರ್ಣಗೊಳಿಸುತ್ತಾರೆ. ಸಫಿನ್ ಅವರ ತಂದೆ-ತಾಯಿ ವಜ್ರ ಖನಿಜ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ 2000 ದಲ್ಲಿ ಅವರಿಬ್ಬರು ಕೆಲಸವನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಸಫಿನ್ ಅವರ ಕುಟುಂಬ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
- ಸಫಿನ್ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಯು ಅವರ 11 ಮತ್ತು 12 ನೇ ತರಗತಿಗಳ ಶುಲ್ಕವನ್ನು ಮನ್ನಾ ಮಾಡುತ್ತದೆ. ಇನ್ನು ಬೆಳಗ್ಗೆ ಸಫನ್ ಅವರ ತಾಯಿ ಬೇರೆಯವರ ಮನೆಗೆ ಅಡುಗೆ ಕೆಲಸಕ್ಕೆ ತೆರಳಿದರೆ, ತಂದೆ ಇಟ್ಟಿಗೆಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆಗೆ ಅವರಿಬ್ಬರು ಅಂಗಡಿಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಸಫನ್ ಅವರು ಇಂಜಿನಿಯರಿಂಗ್ ಮಾಡಲು ಕಾಲೇಜಿಗೆ ಸೇರುತ್ತಾರೆ. ಈ ವೇಳೆ ಸಫಿನ್ ಸಂಬಂಧಿಕರು ಅವರಿಗೆ ಬೋಧನಾ ಶುಲ್ಕವನ್ನ ನೀಡಿ ಸಹಾಯ ಮಾಡುತ್ತಾರೆ.ಸಫಿನ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ದೊಡ್ಡ ಅಧಿಕಾರಿಯಾಗುವ ಕನಸನ್ನು ಹೊಂದಿದ್ದರು. ಇದರಿಂದಲೇ ಶಾಲಾ, ಕಾಲೇಜುಗಳಲ್ಲಿ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರು. ಈ ಕನಸಿನಿಂದಲೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ ಸಫಿನ್ ಅವರು, 2017ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು ತೆರಳುತ್ತಿರುವಾಗ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಆದರೂ ಎದೆಗುಂದದೆ ಪರೀಕ್ಷೆಗೆ ಹಾಜರಾಗುತ್ತಾರೆ. ಬಳಿಕ ತೀವ್ರಗಾಯಗೊಂಡ ಅವರನ್ನು ಆಸ್ಪ್ರತ್ರೆಗೆ ದಾಖಲಿಸಲಾಗಿದ್ದು, ಹಲವಾರು ಬಾರಿ ಶಸ್ತ್ರಚಿಕಿತ್ಸೆಗೆ ಹಾಗೂ ಫಿಸಿಯೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಾರೆ.ತನ್ನ ಜೀವನದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ದೃತಿಗೆಡದೆ ಸಫಿನ್ ಹಸನ್ ಅವರು 2018 ರಲ್ಲಿ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ತನ್ನ ಶ್ರಮಕ್ಕೆ ಪ್ರತಿಫಲವಾಗಿ 570 ನೇ ರ್‍ಯಾಂಕ್ ಗಳಿಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ನಂತರ 2019ರ ಡಿಸೆಂಬರ್ 23ರಂದು ಜಾಮ್‌ನಗರ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ.