ಶಿರೂರು:ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಯತ್ನದಲ್ಲಿದ್ದ ತಂಡ – ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂವರು ವಶಕ್ಕೆ

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದರೋಡೆಗೆ ಯತ್ನಿಸುತ್ತಿದ್ದ ತಂಡವನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಹೆಡೆಮುರಿ ಕಟ್ಟಿದ್ದಾರೆ.

ಬುಧವಾರ ರಾತ್ರಿ ಮಹೇಶ್ ಕಂಬಿ, ಪೊಲೀಸ್‌ ಉಪನಿರೀಕ್ಷಕರು (ತನಿಖೆ),ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ನಲ್ಲಿರುವಾಗ ಬೆಳಿಗ್ಗೆ ಶಿರೂರು ಎಂಬಲ್ಲಿ 5-6 ಜನರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಾಹಿತಿ ಬಂದಿತ್ತು.ರಾಷ್ಟ್ರೀಯ ಹೆದ್ದಾರಿ 66 ರ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರುವ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಲು 7 ಜನರು ಪ್ರಯತ್ನಿಸುತ್ತಿರುವುದನ್ನು ಕಂಡು ಅವರ ಚಲನವಲನಗಳನ್ನು ಗಮನಿಸಿದಾಗ ಅನುಮಾನ ವ್ಯಕ್ತವಾಗಿದೆ. ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಚಾಳಿ ಬಿದ್ದ ಆರೋಪಿಗಳಂತೆ ಕಂಡು ಬಂದಿದ್ದಾರೆ.

ತಕ್ಷಣ ಅವರನ್ನು ಸುತ್ತುವರೆದು ಹಿಡಿಯಲು ಹೋದಾಗ ಅವರುಗಳ ಪೈಕಿ ಚಾರು ಯಾನೆ ಶಾರುಖ್, ಚಪ್ಪು ಯಾನೆ ಶಫಾನ್, ವಾಜೀದ್ ಮತ್ತು ನಿಶಾದ್ ಇವರು ಅಲ್ಲಿಂದ ಓಡಿ ಹೋಗಿದ್ದಾರೆ.ಓಡಿ ಹೋಗುವ ಸಮಯ ಅವರ ಕೈಯಲ್ಲಿದ್ದ 4 ದೊಣ್ಣೆಗಳನ್ನು, ಒಂದು ಕಬ್ಬಿಣದ ರಾಡ್ ನ್ನು ಅಲ್ಲಿಯೇ ಬಿಸಾಡಿ ಒತ್ತಿನೇಣೆ ಗುಡ್ಡೆಯಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.

ಉಳಿದ 3 ಜನರನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದಿದ್ದು ಆರೋಪಿಗಳನ್ನು ಪ್ರಶ್ನಿಸಿದಾಗ ಆರೋಪಿತರು ತಾವು ಭಟ್ಕಳ ಕಡೆಯಿಂದ ಬರುವ ಸಾರ್ವಜನಿಕ ವಾಹನಗಳನ್ನು ತಡೆದು ದರೋಡೆ ಮಾಡಿ ಹಣ ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಲು ಸಿದ್ದತೆ ಮಾಡಿಕೊಂಡು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ದ್ಯಾನೀಶ್ ಮದನಿ, ಮೊಹಮ್ಮದ್ ಕೈಫ್, ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ.

ಆಪಾದಿತರುಗಳು ಮಾರಕಾಯುಧಗಳನ್ನು ಇಟ್ಟುಕೊಂಡು ಸಾರ್ವಜನಿಕರನ್ನು ಗುರಿಮಾಡಿ ದರೋಡೆ ನಡೆಸುವ ಉದ್ದೇಶದಿಂದ ಸಿದ್ದತೆಗಳನ್ನು ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿತರಿಂದ ಸ್ಟೇನ್ ಲೆಸ್ ಚೂರಿ, ಮೊಬೈಲ್, ಕಬ್ಬಿಣದ ರಾಡ್ , ಮೆಣಸಿನ ಹುಡಿಯ ಪ್ಯಾಕೇಟ್, , ಮರದ ದೊಣ್ಣೆಗಳನ್ನು  ವಶಪಡಿಸಿಕೊಳ್ಳಲಾಗಿದೆ.. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2024 ಕಲಂ: 399, 402 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories