ಬೆಂಗಳೂರು: ನಿರ್ಜನ ಪ್ರದೇಶವೊಂದರಲ್ಲಿ ಮಗುವಿನ ಅಳುವ ಶಬ್ಧವನ್ನು ಕೇಳಿಸಿಕೊಂಡು ಜನರು ಶಬ್ಧದ ದಿಕ್ಕಿನೆಡೆಗೆ ನಡೆದಾಗ ಅಕ್ಷರಶಃ ಆಘಾತ ಎದುರಾಗಿತ್ತು.
ಶಬ್ಧವನ್ನು ಹುಡುಕಿ ಬಂದ ಜನರಿಗೆ ಕಣ್ಣಿಗೆ ಕಂಡಿದ್ದು ಗುಂಡಿಯೊಂದರಲ್ಲಿ ಜೀವಂತವಾಗಿ ಅರ್ಧ ಸಮಾಧಿ ಮಾಡಿದ್ದ ನವಜಾತ ಶಿಶು. ಅದನ್ನು ನೋಡಿದ ಜನರ ಎದೆ ಒಮ್ಮೆ ಝಲ್ ಎಂದಿದೆ. ಕೂಡಲೇ ಮಗುವನ್ನು ರಕ್ಷಣೆ ಮಾಡಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ದಿನ್ನೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಡಿಮೆ ಜನ ಇರುವಾಗ ಆರೋಪಿಗಳು ಮಗುವನ್ನು ಕತ್ತಲಲ್ಲಿ ಹೂತು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದೀಗ ಮಗುವನ್ನು ಚಿಕಿತ್ಸೆಗಾಗಿ ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಮಗುವನ್ನು ರಕ್ಷಿಸಲಾಗಿದೆ. ಮಗುವಿನ ದೇಹದಲ್ಲಿ ಸಣ್ಣಪುಟ್ಟ ಗಾಯಗಳು ಕಂಡು ಬಂದಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಮಗುವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸರು ಸೂಚನೆ ನೀಡಿದ್ದಾರೆ.
ಸೂಚನೆ ಬೆನ್ನಲ್ಲೇ ಮಕ್ಕಳ ರಕ್ಷಣಾ ಘಟಕದ ಆಶಾ ಮತ್ತು ಅವರ ತಂಡವು ಆಸ್ಪತ್ರೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಗು ಪ್ರಾಣಾಪಾಯದಿಂದ ಪಾರಾಗಿದೆ. ಆರೋಪಿಗಳ ಸುಳಿವಿಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳು ಸ್ಥಳೀಯರಲ್ಲ ಎಂದು ತೋರುತ್ತದೆ, ಸಿಕ್ಕಿಬೀಳುವ ಆತಂಕದಲ್ಲಿ ಮಗುನನ್ನು ಅವಸರದಲ್ಲಿ ಹೂತುಹಾಕಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಕರಣ ಸಂಬಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.