ಕಾರವಾರ ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ : ಗುತ್ತಿಗೆದಾರರ ಬಾಕಿ ಬಿಲ್ ಪಾವತಿ

ಕಾರವಾರ : ಕಾರವಾರ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಅವರ ದಿಟ್ಟ ನಿರ್ಧಾರಗಳಿಂದ , ನಗರಸಭೆಯಲ್ಲಿ ಬಾಕಿ ಇದ್ದ ತೆರಿಗೆ ವಸೂಲಿ ಕಾರ್ಯಕ್ಕೆ ವೇಗ ದೊರೆತಿದ್ದು, ಪ್ರಸ್ತುತ ಸಾಲಿನಲ್ಲಿ ಇದುವರೆಗೆ 309.93 ಲಕ್ಷ ತೆರಿಗೆ ವಸೂಲಿಯಾಗಿದೆ.‌ ಇದು ವಾರ್ಷಿಕ ಗುರಿಯ ಶೇ.53 ರಷ್ಟು ಸಾಧನೆ ಆಗಿದೆ. ಅಲ್ಲದೇ ತೆರಿಗೆ ಸಂಗ್ರಹ ಉತ್ತಮವಾದ ಹಿನ್ನಲೆಯಲ್ಲಿ ಈ ಹಿಂದೆ 2021-22 ರಿಂದ ಬಾಕಿ ಇದ್ದ ಗುತ್ತಿಗೆದಾರರ 12.51 ಕೋಟಿ ಮೊತ್ತದಲ್ಲಿ , 2.55 ಕೋಟಿ ಕಾಮಗಾರಿಗಳ ಬಿಲ್ ನ್ನು ಪಾವತಿಸಲಾಗಿದೆ.

ಕಾರವಾರ ನಗರಸಭೆಯಲ್ಲಿ 2021-22 ರಲ್ಲಿ ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ , ಕಾರವಾರ ನಗರ ವ್ಯಾಪ್ತಿಯಲ್ಲಿ 263 ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಅವರ ವೆಚ್ಚದ ಬಿಲ್ 12.51 ಕೋಟಿ ರೂ ಮೊತ್ತವನ್ನು ಪಾವತಿಸುವಲ್ಲಿ ತೀವ್ರ ತೊಂದರೆಯಾಗಿದ್ದು, ಅಲ್ಲದೇ ಪೂರ್ಣ ಪ್ರಮಾಣದ ತೆರಿಗೆ ವಸೂಲಾತಿ ನಡೆಯದೇ ಇದ್ದುದರಿಂದ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಅಡಚಣೆಯಾಗಿತ್ತು.

2023 ರ ಆಗಸ್ಟ್ ತಿಂಗಳಲ್ಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಜಿಲ್ಲಾಧಿಕಾರಿಗಳ ಸೂಚನೆಯಂತೆ , ಶೇ.100 ರಷ್ಟು ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿದ್ದು, ನಗರಸಭೆಯ ಎಲ್ಲಾ ತೆರಿಗೆ ವಸೂಲಿಗಾರರಿಗೆ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಮಾತ್ರವಲ್ಲದೇ, ಪ್ರತೀ ತಿಂಗಳು ತೆರಿಗೆ ವಸೂಲಿ ಮಾಡಲು ಗುರಿ ನಿಗಧಿಪಡಿಸಿದ ಕಾರಣ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧ್ಯವಾಗಿದೆ.

ನಗರಸಭೆಯ ತೆರಿಗೆ ವಸೂಲಿ ಉತ್ತಮಗೊಂಡರೂ ಸಹ, ಗುತ್ತಿಗೆದಾರರ ಹಳೆಯ ಬಾಕಿಯ ಮೊತ್ತ ಪಾವತಿಸಲು ಸಾಧ್ಯವಾಗಿರಲಿಲ್ಲ. ತೆರಿಗೆ ವಸೂಲಿ ಮೊತ್ತದಿಂದಲೇ ನಗರಸಭೆಯ ಅಭಿವೃಧ್ದಿ ಕಾರ್ಯಗಳು, ಸಿಬ್ಬಂದಿಯ ವೇತನ ಮತ್ತಿತರ ವೆಚ್ಚಗಳನ್ನು ಪಾವತಿಸಬೇಕಾದ್ದರಿಂದ , ತೆರಿಗೆ ಸಂಗ್ರಹದ ಮೊತ್ತದಲ್ಲಿ ನಗರಸಭೆಯ ಆಡಳಿತ ವೆಚ್ಚ ಪಾವತಿ ಮತ್ತು ಹಳೆಯ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಶೇಕಡಾವಾರು ಪ್ರಮಾಣವನ್ನು ನಿರ್ಣಯಿಸಿ, ಗುತ್ತಿಗೆದಾರರ ಬಾಕಿ ಇರುವ ಮೊತ್ತವನ್ನು ಹಂತ ಹಂತವಾಗಿ ಪಾವತಿ ಮಾಡಲು ಯೋಜನೆ ರೂಪಿಸಿದ್ದು, ಅದರಂತೆ 2023-24 ರಲ್ಲಿ 27 ಮಂದಿ ಗುತ್ತಿಗೆದಾರರಿಗೆ 1.8 ಕೋಟಿ ಹಾಗೂ ಪ್ರಸ್ತುತ ಸಾಲಿನಲ್ಲಿ 40 ಗುತ್ತಿಗೆದಾರರಿಗೆ 1.47 ಕೋಟಿ ರೂ ಸೇರಿದಂತೆ ಇದುವರೆಗೆ 67 ಗುತ್ತಿಗೆದಾರರಿಗೆ 2.55 ಕೋಟಿ ರೂ ಗಳನ್ನು ಪಾವತಿಸಲಾಗಿದೆ.
……..

ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ ತೋರಿರುವ ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

* – ಗಂಗೂಬಾಯಿ ಮಾನಕರ, ಆಡಳಿತಾಧಿಕಾರಿಗಳು, ನಗರಸಭೆ ಹಾಗೂ ಜಿಲ್ಲಾಧಿಕಾರಿಗಳು .

Latest Indian news

Popular Stories