ಕೊಡಗಿನಲ್ಲಿ ಕಾಲೇಜುಗಳು ಆರಂಭ : ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ : ಕೋವಿಡ್ ಪರೀಕ್ಷೆ ಪ್ರಗತಿ

ಮಡಿಕೇರಿ ನ.17 : ರಾಜ್ಯ ಸರಕಾರ ಅಂತಿಮ ಪದವಿ ಕಾಲೇಜುಗಳ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಎಲ್ಲಾ ಸಿದ್ದತೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಪ್ರಾರಂಭಿಕ ಹಂತವಾಗಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.
ಆದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಅಂತಿಮ ಪದವಿ ತರಗತಿಗಳಿಗೆ ಹಾಜರಾಗಲು ಬಹುತೇಕ ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದು ಕಂಡು ಬಂತು. ಕೋವಿಡ್ ಪರೀಕ್ಷೆಯ ಕುರಿತ ಭಯ ಮತ್ತು ಜಿಲ್ಲೆಯಲ್ಲಿ ಇದೀಗ ಶೀತ ವಾತಾವರಣ ಸಹಿತ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಸಾಮಾನ್ಯ ಶೀತ ಜ್ವರ ಕಂಡು ಬರುತ್ತಿದೆ. ಹೀಗಾಗಿ ಇಂದು ಬಹುತೇಕ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಗೈರು ಹಾಜರಾಗಿದ್ದು ಕಂಡು ಬಂತು. ಈ ಮೊದಲಿನಿಂದಲೂ ಆನ್‍ಲೈನ್ ತರಗತಿಗಳು ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೂಡ ಅತ್ತ ಕಡೆ ವಾಲಿರುವುದು ಕೂಡ ಕಂಡು ಬಂತು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕ್ಷೀಣಿಸಿತ್ತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಅಂತಿಮ ವರ್ಷದ 500 ಮಂದಿ ವಿದ್ಯಾರ್ಥಿಗಳಿದ್ದು, ಇಂದು ಕೇಲವ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತ್ರವೇ ಕೋವಿಡ್ ಪರೀಕ್ಷೆಗೆ ಹಾಜರಾಗಿದ್ದು ಕಂಡು ಬಂತು. ಕಾಲೇಜಿನ ಎಲ್ಲಾ ವರ್ಗದ ಸಿಬ್ಬಂದಿಗಳು, ಅಧ್ಯಾಪಕರು ಕೂಡ ಕೋವಿಡ್ ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲಾ ಆರೋಗ್ಯ ಇಲಾಖೆಯ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಸಿಬ್ಬಂದಿಗಳು ಎಫ್‍ಎಂಸಿ ಕಾಲೇಜಿನಲ್ಲಿ ಸ್ವ್ಯಾಬ್ ಸಂಗ್ರಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ ಅವರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಸ್ಥಳದಲ್ಲಿ ಹಾಜರಿದ್ದು, ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಕಾಲೇಜು ಪ್ರಾಂಶುಪಾಲ ಜಗತ್ ತಿಮ್ಮಯ್ಯ, ಈಗಾಗಲೇ ಎಲ್ಲಾ ತರಗತಿಗಳು, ಗ್ರಂಥಾಲಯ, ಆಡಳಿತ ಕಚೇರಿ, ಶೌಚಾಲಯವನ್ನು ಸ್ಯಾನಿಟೈಜ್ ಮಾಡಲಾಗಿದೆ. ವಿದ್ಯಾರ್ಥಿಗಳೂ ಕೂಡ ಪೋಷಕರಿಂದ ಒಪ್ಪಿಗೆ ಪತ್ರಗಳನ್ನು ಜೊತೆಯಲ್ಲಿಯೇ ತಂದಿದ್ದಾರೆ. ಇಂದು ಕೆಲವೇ ವಿದ್ಯಾರ್ಥಿಗಳು ಮಾತ್ರವೇ ಕೋವಿಡ್ ಪರೀಕ್ಷೆಗೆ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗುತ್ತದೆ. ಆನ್ ಲೈನ್ ಕ್ಲಾಸ್‍ಗಳು ಕೂಡ ಜಾರಿಯಲ್ಲಿದ್ದು, ಆ ಮೂಲಕವೂ ಎಂದಿನ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಎಂದಿನಂತೆ ಕಾಲೇಜನ್ನು ನ.21ರಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಲವ 10 ರಿಂದ 15 ಮಂದಿ ವಿದ್ಯಾರ್ಥಿಗಳು ಮಾತ್ರವೇ ಕಾಲೇಜಿಗೆ ಆಗಮಿಸಿದ್ದು ಕಂಡು ಬಂತು. ಕಾಲೇಜು ತೆರೆಯದೇ ತಿಂಗಳುಗಳೇ ಉರುಳಿದ್ದ ಹಿನ್ನಲೆಯಲ್ಲಿ ಕಾಲೇಜು ಆವರಣದಲ್ಲಿ ಕಾಡು ಗಿಡಗಳು ಬೆಳೆದು ನಿಂತಿದ್ದು, ಇಂದು ಮುಂಜಾನೇ ಅವುಗಳನ್ನು ಶುಚಿಗೊಳಿಸುತ್ತಿದ್ದುದು ಕಂಡು ಬಂತು.
ಮಹಿಳಾ ಕಾಲೇಜಿನಲ್ಲಿ 25 ವಿದ್ಯಾರ್ಥಿನಿಯರೂ ಮಾತ್ರವೇ ಇಂದು ಕಾಲೇಜಿಗೆ ಆಗಮಿಸಿದ್ದರು. ಮಹಿಳಾ ಕಾಲೇಜಿನ ಸಿಬ್ಬಂದಿಗಳಿಗೆ ನ.14ರಂದು ಕೋವಿಡ್ ಪರೀಕ್ಷೆ ನಡೆಸಿದ್ದು, ಅದರ ವರದಿ ಇನ್ನಷ್ಟೇ ಬರಬೇಕಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಿ.ಜೆ. ಜವರಪ್ಪ ಮಾಹಿತಿ ನೀಡಿದರು.
ಈಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಮಾತನಾಡಿ, ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಒಟ್ಟು 23 ಮೊಬೈಲ್ ಟೀಂಗಳನ್ನು ಕಳುಹಿಸಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಕಾಲೇಜುಗಳಿಗೆ ಬರಲಾಗದ ಮಕ್ಕಳು ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಎಲ್ಲಾ ಪದವಿ ಕಾಲೇಜು, ಹಾಸ್ಟೇಲ್ ಸಿಬ್ಬಂದಿಗಳು, ಅಡುಗೆ ಸಿಬ್ಬಂದಿಗಳಿಗೂ ಕೂಡ ಕೋವಿಡ್ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಮೂರು ದಿನಗಳಲ್ಲಿ ಈ ವರದಿ ಬರಲಿದೆ ಎಂದು ಮಾಹಿತಿ ನೀಡಿದರು.

Latest Indian news

Popular Stories