ಪ್ರಿಯಕರನ ಜೊತೆ ಸೇರಿ ಮಗುವಿಗೆ ಚಿತ್ರ ಹಿಂಸೆ; ತಾಯಿ ಮತ್ತು ಬಾಯ್ ಫ್ರೆಂಡ್ ಅರೆಸ್ಟ್

ಬೆಂಗಳೂರು: ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿದ್ದಲ್ಲದೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ತಾಯಿ ಶಾರಿನ್‌ ಮತ್ತು ಆಕೆಯೊಂದಿಗೆ ಸೇರಿ ಮಗುವನ್ನು ಹಿಂಸಿಸಿದ ಬಾಯ್‌ಫ್ರೆಂಡ್‌ ದಿನೇಶ್‌ನನ್ನು ಬಂಧಿಸಿದ್ದಾರೆ.

ಸ್ಟಾಲಿನ್‌ ಎಂಬ ಪುಟ್ಟ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಶಾರಿನ್‌ ತನ್ನ ಗೆಳೆಯನ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು ಎಂಬ ಅಂಶ ಕಳೆದ ಫೆಬ್ರವರಿ 19ರಂದು ಮಹಿಳಾ ಸಂಘಟನೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬೆಳಕಿಗೆ ಬಂದಿತ್ತು.

ರಾಜೇಶ್ವರಿ ಮತ್ತು ಇತರ ಮಹಿಳೆಯರು ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಗುವೊಂದು ದಿಗ್ಬಂಧನದಲ್ಲಿದೆ ಎಂಬ ಸುದ್ದಿ ತಿಳಿದು ಭೇಟಿ ನೀಡಿದಾಗ ಕರುಣಾಜನಕ ಕಥೆ ಬೆಳಕಿಗೆ ಬಂದಿತ್ತು. ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.

ಬನಶಂಕರಿ 3ನೇಹಂತದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ತಾಯಿ ಶಾರಿನ್ ವೀರಭದ್ರನಗರದ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಮೂರುವರೆ ವರ್ಷದ ಮಗು ಸ್ಟಾಲಿನ್ ನೊಂದಿಗೆ ಇದ್ದಳು. ಮನೆಗೆ ಒಬ್ಬ ವ್ಯಕ್ತಿ ಪ್ರತಿನಿತ್ಯ ಬಂದು ಹೋಗುತ್ತಿದ್ದು, ಅವನೊಂದಿಗೆ ಶಾರಿನ್ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ.

ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದಾರೆ.

Latest Indian news

Popular Stories