ಉ.ಕ | ಹಳಿಯಾಳ ಪಟ್ಟಣ‌ ಹಾಗೂ ಗ್ರಾಮದಲ್ಲಿ ಸರಣಿ ರೂಪದಲ್ಲಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ವ್ಯಾಪಾರಸ್ಥರು

ಕಾರವಾರ : ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಕಳ್ಳತನ ಪ್ರಕರಣ ಸರಣಿ ರೂಪದಲ್ಲಿ ನಡೆದಿವೆ.5 ಅಂಗಡಿ ಹಾಗೂ 2 ಮನೆ ಕಳ್ಳತನ ಮಾಡಿ, ಕಳ್ಳರು ಪರಾರಿಯಾಗಿದ್ದಾರೆ.

ಮೇ. 13 ರ ಮಧ್ಯರಾತ್ರಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಶಾರದ ಮೊಬೈಲ್ ಸ್ಟೋರ್ ಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟ್ಟರ್ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿರುವ ಮೇಘರಾಜ್ ಶೆಟ್ಟಿ ಅವರ ಒಡೆತನಕ್ಕೆ ಸೇರಿದ ಅರಿಹಂತ ಎಲೆಕ್ಟ್ರಾನಿಕ್ಸ್ ಅಂಗಡಿ ಬೀಗ ಮುರಿದು 15 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ಹಳಿಯಾಳ ಪಟ್ಟಣದ ಫಿಶ್ ಮಾರ್ಕೆಟ್ ಸರ್ಕಲ್ ಬಳಿ ಇರುವ ಸಾವೇರ ಕ್ರಾಸ್ಟಾ ಅವರ ಒಡೆತನದ ಮೌಂಟ್ ಮೇರಿ ಬೇಕರಿಯ ಬಾಗಿಲನ್ನು ಮುರಿದ ಕಳ್ಳರು ಅಂಗಡಿಯಲ್ಲಿದ್ದ 1 ಸಾವಿರಕ್ಕೂ ಅಧಿಕ ನಗದನ್ನು ಕಳ್ಳತನ ಮಾಡಿ ಕಾಲ್ಕಿತ್ತಿದ್ದಾರೆ.

ಮೇ 1 ರಂದು ಮಾರುಕಟ್ಟೆ ಪ್ರದೇಶದ ಲಕ್ಷ್ಮೀಕಾಂತ ಪೂಜಾರಿ ಅವರಿಗೆ ಸೇರಿದ ಶ್ರೀ ಲಕ್ಷ್ಮೀ ಪೋಟೋ ಸ್ಟುಡೀಯೋದ ಬಾಗಿಲಿ ಬೀಗವನ್ನು ಮುರಿದು 12,000 ನಗದು ಹಾಗೂ 30,000 ಮೌಲ್ಯದ ಕ್ಯಾಮೆರಾ ಕಳ್ಳತನ ಪ್ರಕರಣ ದಾಖಲಾಗಿದೆ. ಅಲ್ಲದೆ ಮೇ 3ರಂದು ಪುನಃ ಅದೇ ಅಂಗಡಿಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.

ಇದೇ ಮೇ ತಿಂಗಳ 7ರ ಮತದಾನದ ಮಧ್ಯರಾತ್ರಿ ದ್ವಿಚಕ್ರ ವಾಹನ ಮೇಲೆ ಬಂದ ಇಬ್ಬರೂ ಕಳ್ಳರು ಯಲ್ಲಾಪುರ ನಾಖಾ ಹತ್ತಿರ ಇರುವ ಶ್ರೀವೈನ್ಸ್ ಮಧ್ಯದ ಅಂಗಡಿಯ ಶಟರ್ ಮುರಿದು ಅಂಗಡಿಯಲ್ಲಿದ್ದ ನಾಲ್ಕು ಸಾವಿರ ದೋಚಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದೆ.

ಮೇ 11 ರ ಮಧ್ಯ ರಾತ್ರಿ ಮುರ್ಕವಾಡ ಗ್ರಾಮದ ಶಂಭಾಜೀ ಗುತ್ತೇನ್ನವರ ಮಾಲಿಕತ್ವದ ಮನೆಗೆ ನುಗ್ಗಿ ಒಂದು ಚಿನ್ನದ ಮಂಗಲಸೂತ್ರ, ಮೂರು ಉಂಗುರಗಳು, ಇನ್ನಿತರ ಚಿನ್ನದ ಆಭರಣಗಳು ಸೇರಿದಂತೆ ಬೆಳ್ಳಿಯ ಕೆಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಹನುಮಂತ ಶಿಂಧೆ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಮೇ ತಿಂಗಳ ಒಂದರಲ್ಲಿಯೇ 5 ಅಂಗಡಿ, ಎರಡು ಮನೆ ಕಳ್ಳತನ ಪ್ರಕರಣಗಳಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು, ಆತಂಕಕ್ಕಿಡಾಗಿದ್ದಾರೆ. ಪೊಲೀಸರು ಗಸ್ತು ಹೆಚ್ಚಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.‌ ದೂರು
ನೀಡಿದರು ಸಹ ಯಾವುದೇ ರೀತಿಯಾದಂತಹ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಇಲಾಖೆಯ ಮೇಲಿದೆ.
….

Latest Indian news

Popular Stories