ಉಡುಪಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

ಉಡುಪಿ, ಮೇ 17: ಕಾನೂನು ವಿದ್ಯಾರ್ಥಿಗಳಿಬ್ಬರು ಉಡುಪಿ ನಗರ ಸಂಚಾರ ಠಾಣೆಯ ಎಸ್ಸೈ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಮೇ 16ರಂದು ರಾತ್ರಿ ಕಲ್ಸಂಕ ಸಮೀಪ ನಡೆದಿದೆ.

ಆರೋಪಿಗಳನ್ನು ಶ್ರೀವತ್ಸ ಮತ್ತು ಗಣೇಶ್ ಪೂಜಾರಿ ಎಂದು ಗುರುತಿಸಲಾಗಿದೆ.

ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಸುದರ್ಶನ್ ದೊಡ್ಡಮನಿ ನಿಲ್ಲಿಸಿ, ದಂಡ ಪಾವತಿಸುವಂತೆ ಸೂಚಿಸಿದರು. ಅದಕ್ಕೆ ಸವಾರ ನೋಟೀಸ್ ನೀಡುವಂತೆ ತಿಳಿಸಿದನು.

ಆಗ ಎಸ್ಸೈ ದಾಖಲಾತಿ ತೋರಿಸಲು ಹೇಳಿದಾಗ ಆತ ನಿರಾಕರಿಸಿದ ಎನ್ನಲಾಗಿದೆ. ಬಳಿಕ ಬುಲೆಟ್‌ನಲ್ಲಿ ಮತ್ತೊಬ್ಬ ಬಂದು ‘ದಂಡ ಹಾಕುತ್ತೀಯಾ’ ಎಂದು ಏರುಧ್ವನಿಯಲ್ಲಿ ಮಾತಾನಾಡುತ್ತಾ ಮೈಮೇಲೆ ಏರಿಬಂದಿದ್ದು, ಇಬ್ಬರೂ ಸೇರಿ ‘ನಾವು ಕಾನೂನು ವಿದ್ಯಾರ್ಥಿಗಳು ನಮಗೂ ಕಾನೂನು ಗೊತ್ತು’ ಎಂದು ವಿಡಿಯೋ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories