ಉಡುಪಿ:ಫೆ.16, ಉಡುಪಿಯ ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರುವರೆ ವರ್ಷದ ಹೆಣ್ಣು ಮಗುವೊಂದು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದು, ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿ ತನ್ನನ್ನು ತಾಯಿಯ ಬಳಿ ಕರೆದುಕೊಂಡು ಹೋಗುವಂತೆ ಹೇಳುತ್ತಿದ್ದು, ವಿಷಯ ತಿಳಿದ ವಿಶು ಶೆಟ್ಟಿಯವರು ಮಗುವನ್ನು ರಕ್ಷಿಸಿ ನಿಟ್ಟೂರಿನ ಬಾಲಕಿಯ ಬಾಲ ಮಂದಿರಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಬಾಲಕಿಯು ಮೂರುವರೆ ವರ್ಷದವಳಾಗಿದ್ದು ಬಹಳ ಚುರುಕಾಗಿದ್ದು, ತನ್ನ ತಾಯಿ ತನ್ನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಬೇಸರಗೊಂಡು, ತಾಯಿಯನ್ನು ಹುಡುಕಿಕೊಂಡು ಬಂದಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಉಡುಪಿಯ ಬಸ್ ಸ್ಟ್ಯಾಂಡ್ ಬಳಿ ವ್ಯಾಪಾರ ನಡೆಸುತ್ತಿರುವುದಾಗಿ ಹೇಳಿದ್ದರಿಂದ ಮಗುವನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಹುಡುಕಾಡಿದರೂ ತಾಯಿಯ ಪತ್ತೆಯಾಗದ ಕಾರಣ ಮಗುವನ್ನು ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಯಿತು.
ಈ ಘಟನೆಯಲ್ಲಿ ಹೆತ್ತವರ ನಿರ್ಲಕ್ಷ ತೋರಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಬಾಲಕಿಯ ಹೆತ್ತವರಿಗೆ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ. ಇಂತಹ ಮಕ್ಕಳನ್ನು ಇಂತಹ ಪರಿಸ್ಥಿತಿಯಲ್ಲಿ ರಕ್ಷಣೆ ಮಾಡದೇ ಹೋದಲ್ಲಿ ಮಗುವಿಗೆ ದುರಂತ ಸಂಭವಿಸುವುದು ಖಚಿತ. ರಕ್ಷಣಾ ಕಾರ್ಯದಲ್ಲಿ ಮಂಜು ಸಹಕರಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಹೆತ್ತವರು ಬಾಲಕಿಯರ ಬಾಲಮಂದಿರ ಸಂಪರ್ಕಿಸಲು ಕೋರಲಾಗಿದೆ.