ಪ್ರವಾದಿ ನಿಂದನೆಯ ಆರೋಪ: ಬಸ್ ಕಂಡಕ್ಟರ್’ಗೆ ಇರಿದ ವಿದ್ಯಾರ್ಥಿಯ ಬಂಧನ

ಉ.ಪ್ರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 20 ವರ್ಷದ ಯುವಕನೊಬ್ಬ ಟಿಕೆಟ್ ದರದ ಕುರಿತು ಜಗಳವಾಡಿದ ನಂತರ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಹೇಳಿದೆ.
ಆರೋಪಿಯು ವೀಡಿಯೊದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕಂಡಕ್ಟರ್ “ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ” ಕಾರಣಕ್ಕಾಗಿ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾನೆ.
ಪ್ರಯಾಗರಾಜ್ ಪೊಲೀಸರ ಪ್ರಕಾರ, ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಲಾರೆಬ್ ಹಶ್ಮಿ (20) ಎಂದು ಗುರುತಿಸಲಾಗಿದೆ. ಅವರು ಬಸ್ ಕಂಡಕ್ಟರ್ ಹರಿಕೇಶ್ ವಿಶ್ವಕರ್ಮ (24) ಅವರೊಂದಿಗೆ ಟಿಕೆಟ್ ದರದ ಬಗ್ಗೆ ಜಗಳವಾಡಿದ್ದಾರೆ.
ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಹಶ್ಮಿ ಎಂಬಾತ ವಿಶ್ವಕರ್ಮ ಎಂಬುವವರ ಮೇಲೆ ಕ್ಲೀವರ್‌ನಿಂದ ಹಲ್ಲೆ ನಡೆಸಿದ್ದು, ಆತನ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ನಂತರ ಹಶ್ಮಿ ಬಸ್‌ನಿಂದ ಜಿಗಿದು ಅಡಗಿಕೊಳ್ಳಲು ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸಿದ್ದಾನೆ.
ಕಾಲೇಜಿನೊಳಗೆ ಹಶ್ಮಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಹಶ್ಮಿಯು ಬಸ್ ಕಂಡಕ್ಟರ್ ಧರ್ಮನಿಂದೆಯ ಮತ್ತು “ಪ್ರವಾದಿ ಮುಹಮ್ಮದ್‌ರನ್ನು ಅವಮಾನಿಸಿದ” ಎಂದು ಆರೋಪಿಸುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ಬಸ್ಸಿನ ಒಳಗಿನಿಂದ ತೆಗೆದ ಮತ್ತೊಂದು ವೀಡಿಯೊ, ಕೈಯಲ್ಲಿ ಕ್ಲೀವರ್ನೊಂದಿಗೆ ಹಶ್ಮಿ ಹೊರಗೆ ಓಡುತ್ತಿರುವುದನ್ನು ತೋರಿಸುತ್ತದೆ.
ನಂತರ ಈ ಘಟನೆಯನ್ನು ಮೆಲುಕು ಹಾಕಿದ ಬಸ್ಸಿನ ಚಾಲಕ ಮಂಗಳ ಯಾದವ್, “ಇದ್ದಕ್ಕಿದ್ದಂತೆ ಬಸ್ಸಿನೊಳಗೆ ದಾಳಿ ನಡೆದಿದೆ. ನಾನು ಶಬ್ದವನ್ನು ಕೇಳಿ ಬಸ್ ಅನ್ನು ನಿಲ್ಲಿಸಿದೆ. ವಿಶ್ವಕರ್ಮ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದೇವೆ ಎಂದು ಯಾದವ್ ಹೇಳಿದರು.
ಆರೋಪಿಯನ್ನು ಕಾಲೇಜಿನಲ್ಲಿ ಬಂಧಿಸಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.