ನವದೆಹಲಿ,ಜ.21:- ಎರಡನೇ ಹಂತದ ಕೋವಿಡ್ ಸಲಿಕೆ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಮೊದಲ ಹಂತದ ಅಭಿಯಾನ ದೇಶದಲ್ಲಿ ಭರದಿಂದ ನಡೆಯುತ್ತಿದೆ. ಈಗಾಗಲೇ ವಿವಿಧ ಕ್ಷೇತ್ರಗಳ ಕರೊನಾ ವಾರಿಯರ್ಸ್ ಸೇರಿದಂತೆ ಹಲವಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಕೋವ್ಯಾಕ್ಸಿನ್’ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್‍ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ 50 ವರ್ಷಕ್ಕಿಂತ ಮೇಲಿನ ಎಲ್ಲ ನಾಗರಿಕರಿಗೆ, 50 ವರ್ಷ ಮೇಲ್ಪಟ್ಟ ಎಲ್ಲ ಸಂಸದರು ಹಾಗೂ ಶಾಸಕರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.