ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ವರ್ಷದಿಂದ ಈ ಭಾಗದಲ್ಲಿ ಹಿಜಾಬ್ ವಿವಾದ, ಧರ್ಮ ದಂಗಲ್, ಹಿಂದೂ ಮುಸ್ಲಿಂ ಸಮುದಾಯಗಳ ಘರ್ಷಣೆ, ಕೊಲೆ, ಹಿಂಸಾಚಾರಗಳಿಂದ ಬಿಜೆಪಿ ಬಗ್ಗೆ ಜನರಲ್ಲಿ ಒಂದು ರೀತಿಯ ಅಸಮಾಧಾನವಿದೆ. ಚುನಾವಣೆ ಹೊಸ್ತಿಲಿನಲ್ಲಿ ಈ ಭಾಗದ ಕಾರ್ಯಕರ್ತರು, ನಾಯಕರಿಗೆ ಉತ್ತೇಜನ ನೀಡಲು ಅಮಿತ್ ಶಾ ಭೇಟಿ ಮಹತ್ವವಾಗಿದೆ.
ಮದ್ಯ ಮಾರಾಟ ನಿಷೇಧ: ವಿವಿಧ ಕಾರ್ಯಕ್ರಮಗಳ ನಿಮಿತ್ತ ಪುತ್ತೂರು ವಲಯ ವ್ಯಾಪ್ತಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಇಂದು ಪುತ್ತೂರು ವಲಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಆದೇಶ ಹೊರಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ಮಧ್ಯಾಹ್ನದಿಂದ ರಾತ್ರಿಯವರೆಗೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಈ ನಿಯಮ ಮೀರಿ ಮಾರಾಟ ಮಾಡಿದರೇ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸ ವಿವರ ಹೀಗಿದೆ: ಇಂದು ಮಧ್ಯಾಹ್ನ ಅವರು ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಶ್ರೀ ಪಂಚಮುಖಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದು ಪೂಜೆ ನೆರವೇರಿಸಲಿದ್ದಾರೆ. ಬಳಿಕ ಅಲ್ಲಿ ಭಾರತ್ ಮಾತಾ ಮಂದಿರದ ಉದ್ಘಾಟನೆ ನೆರವೇರಿಸುವರು.
ಬಳಿಕ ಪುತ್ತೂರಿಗೆ ತೆರಳುವ ಅವರು ಸಂಜೆ ವಿವೇಕಾನಂದ ಕಾಲೇಜಿನ ಮೈದಾನದಲ್ಲಿ ಕ್ಯಾಂಪ್ಕೊದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಮಂಗಳೂರಿನಲ್ಲಿ ಪೂರ್ವನಿಗದಿತ ಸಭೆಗಳಲ್ಲಿ ಭಾಗವಹಿಸಿ ರಾತ್ರಿ ದೆಹಲಿಗೆ ತೆರಳಲಿದ್ದಾರೆ.