ಪಣಂಬೂರು: ತಣ್ಣೀರುಬಾವಿ ಬೀಚ್ ಬಳಿ ರವಿವಾರ ಟ್ರಾಫಿಕ್ ಜಾಂ ನಡುವೆ ಕ್ರಿಕೆಟ್ ಮ್ಯಾಚ್‌ನಲ್ಲಿ ಜಯಗಳಿಸಿದ ಯುವಕರ ತಂಡವೊಂದು ಬೈಕಿನಲ್ಲಿ ಮೆರವಣಿಗೆ ಬಂದಾಗ ಕರ್ತವ್ಯ ನಿರತ ಪೊಲೀಸ್ ಸಿಬಂದಿ ಲಾಠಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಹೇಳಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಲಾಠಿ ಚಾರ್ಜ್ ಘಟನೆಯ ಸಂಬಂಧ ಪೊಲೀಸ್ ಪೇದೆ ಸುನೀಲ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಪೋಷಕರು ಹಾಗು ಹುಡುಗರಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಕಮಿಷನರ್ ಹೇಳಿದರು.
ಹೊಸ ವರ್ಷದ ಆರಂಭದ ದಿನ ತಣ್ಣೀರುಬಾವಿ ಬೀಚ್ ಬಳಿ ವಾಹನ ದಟ್ಟಣೆ ಜಾಂ ಆಗಿತ್ತು. ಪಣಂಬೂರು ಪೊಲೀಸರು ಕರ್ತವ್ಯದಲ್ಲಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಪರದಾಡುತ್ತಿದ್ದರು ಎನ್ನಲಾಗಿದೆ. ಇದರ ನಡುವೆ ವಿಜಯೋತ್ಸವ ಯುವಕರ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ. ಬಾಲಕನಿಗೆ ಹೊಡೆದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಸಂಬಂಧ ವಿಡಿಯೋಗಳು ವೈರಲ್ ಆಗಿತ್ತು.