ಬಂಟ್ವಾಳ, ಜ.14: ಪಾಣೆಮಂಗಳೂರು ಹಳೆ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಪಾರ್ಥೀವ ಶರೀರ ಪತ್ತೆಯಾಗಿರುವ ಸಜಿಪನಡುವಿನ ಬಿಜೆಪಿ ಮುಖಂಡ ಹಾಗೂ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯ ರಾಜೇಶ್ ಪೂಜಾರಿ (38) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಜೇಶ್ ಪೂಜಾರಿಯವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಹೀಗಾಗಿ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.
ಶರ್ಟ್ ಮತ್ತು ಪ್ಯಾಂಟ್ ಪಾಕೆಟ್‌ಗಳಲ್ಲಿ ಮೊಬೈಲ್ ಫೋನ್ ಮತ್ತು ವಾಲೆಟ್ ಪತ್ತೆಯಾಗಿದೆ. ಆತನ ಮೊಬೈಲ್‌ನಿಂದ ಬಂದ ಕೊನೆಯ ಕರೆಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಜತೆಗೆ ಸಮೀಪದ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯನ್ನೂ ಪೊಲೀಸರು ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಹತ್ವದ ಸುಳಿವುಗಳನ್ನು ಸಂಗ್ರಹಿಸಿದೆ.