ಬ್ಯಾರಿ ಮುಸ್ಲಿಮರಲ್ಲಿ ನಾಯಕತ್ವದ ಗುಣವಿದೆ – ನಾಸಿರ್ ಎನ್.ಎಸ್.


ಕೊಣಾಜೆ, ಆ.13: ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ‘ಸ್ವಾತಂತ್ರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಬ್ಯಾರಿ ಮುಸ್ಲಿಮರ ಪಾತ್ರ’ದ ಕುರಿತು ಉಪನ್ಯಾಸ ಕಾರ್ಯಕ್ರಮವು ಕೊಣಾಜೆ ಸಮೀಪದ ನಡುಪದವಿನ ಹಯಾತುಲ್ ಇಸ್ಲಾಂ ಮದ್ರಸದ ಹಾಲ್‌ನಲ್ಲಿ ರವಿವಾರ ನಡೆಯಿತು.


ನಡುಪದವಿನ ಅಲ್ ಉಮರ್ ಮಸೀದಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಲೇಖಕರ ಸಂಘದ ಉಪಾಧ್ಯಕ್ಷ ಆಲಿಕುಂಞಿ ಪಾರೆ, ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಟಿ., ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ಅಶೀರುದ್ದೀನ್ ಸಾರ್ತಬೈಲ್ ಉಪನ್ಯಾಸ ನೀಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಲ್ ಉಮರ್ ಮಸ್ಜಿದ್‌ನ ಅಧ್ಯಕ್ಷ ನಾಸಿರ್ ಎನ್.ಎಸ್.‘ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಅದನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿವೆ. ಈ ಸಂದರ್ಭ ‘ಮೇಲ್ತೆನೆ’ ಸಂಘಟನೆಯು ವಾಸ್ತವ ಸಂಗತಿಯನ್ನು ಯುವ ಪೀಳಿಗೆಯ ಮುಂದಿಡಲು ನಡೆಸುತ್ತಿರುವ ಕೆಲಸ ಶ್ಲಾಘನೀಯ. ಬ್ಯಾರಿ ಮುಸ್ಲಿಮರಲ್ಲಿ ನಾಯಕತ್ವದ ಗುಣವಿದೆ. ಹಾಗಾಗಿ ಯಾರೂ ಕೂಡ ಹಿಂಬಾಲಕರಾಗದೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.


ಕೊಣಾಜೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಶುಭ ಹಾರೈಸಿದರು. ಮಸೀದಿಯ ಖತೀಬ್ ಅಬ್ದುಲ್ ಮಜೀದ್ ನಿಝಾಮಿ ದುಆಗೈದರು. ಮೇಲ್ತೆನೆಯ ಅಧ್ಯಕ್ಷ ಬಶೀರ್ ಕಲ್ಕಟ್ಟ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಮೇಲ್ತೆನೆಯ ಮಾಜಿ ಅಧ್ಯಕ್ಷರಾದ ಹಂಝ ಮಲಾರ್, ಮುಹಮ್ಮದ್ ಬಾಷಾ ನಾಟೆಕಲ್, ಜೊತೆ ಕಾರ್ಯದರ್ಶಿ ಬಿಎಂ ಕಿನ್ಯ, ಸದಸ್ಯ ಆಸೀಫ್ ಬಬ್ಬುಕಟ್ಟೆ, ಬಾಳೆಪುಣಿ ಗ್ರಾಪಂ ಸದಸ್ಯ ಸಿಎಂ ಶರೀಫ್, ಪುತ್ತು ಉಸ್ತಾದ್, ಮಸೀದಿಯ ಆಡಳಿತ ಕಮಿಟಿಯ ಸದಸ್ಯರಾದ ಎಸ್.ಎ. ಉಸ್ಮಾನ್, ಬಾವಾ ಕಟೊಡಿ, ಇಸ್ಮಾಯೀಲ್ ಸಿ.ಎಚ್., ಅಬೂಬಕರ್ ಪಾಲ್ಗೊಂಡಿದ್ದರು.


ಮೇಲ್ತೆನೆಯ ಸದಸ್ಯ ಇಬ್ರಾಹೀಂ ನಡುಪದವು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಂಗಳೂರ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.
///

Latest Indian news

Popular Stories