ಮಂಗಳೂರು: ನಗರದ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 11.16 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ
ಕೇರಳದ ಕಾಸರಗೋಡಿನ ಪ್ರಯಾಣಿಕನೊಬ್ಬ ಜನವರಿ 30 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 814 )ಮೂಲಕ ದುಬೈನಿಂದ ಮಂಗಳೂರು ವಿಮಾನದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್ ನಲ್ಲಿದ್ದ ಎರಡು ಬೆಡ್‌ಶೀಟ್‌ಗಳು ಮತ್ತು ಎರಡು ದಿಂಬಿನ ಕವರ್‌ನಲ್ಲಿ ಹಾರ್ಲಿಕ್ಸ್ ಜಾರ್‌ನಲ್ಲಿ ಮರೆಮಾಚಿದ ಸ್ಥಿತಿಯಲ್ಲಿ ಚಿನ್ನ ಪತ್ತೆಯಾಗಿದೆ.
ಆತ ಚಿನ್ನವನ್ನು ಪುಡಿಯ ರೂಪದಲ್ಲಿ ಸಾಗಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ 179 ಗ್ರಾಂ ಚಿನ್ನ ಪತ್ತೆಯಾಗಿದೆ. ಈ ಚಿನ್ನದ ಮೌಲ್ಯ 11,16,960 ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.