ಈ ರೀತಿಯ ವಂಚನೆ ಕರೆ ನಿಮಗೂ ಬರಬಹುದು: ಜಾಗೃತರಾಗಿರಿ | ಆನ್‌ಲೈನ್ ಮೂಲಕ ವೈದ್ಯರಿಗೆ ಬರೋಬ್ಬರಿ 16.5 ಲಕ್ಷ ವಂಚನೆ

ಪುತ್ತೂರು: ಮಾದಕ ವಸ್ತು ಸಾಗಾಟ ಸಂಬಂಧ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಪೊಲೀಸರ ಸೋಗಿನಲ್ಲಿ ವೈದ್ಯರೊಬ್ಬರಿಗೆ ಬರೋಬ್ಬರಿ 16.5 ಲಕ್ಷ ವಂಚಿಸಿದ ಘಟನೆ ನಡೆದಿದ್ದು, ಈ ಕುರಿತಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಬೊಳುವಾರು ನಿವಾಸಿ ಡಾ.ಚಿದಂಬರ ಅಡಿಗ ಎಂಬವರು ವಂಚನೆಗೊಳಗಾದ ವೈದ್ಯರು.

ಡಾ.ಚಿದಂಬರ ಅಡಿಗ ಅವರ ಮೊಬೈಲ್ ಗೆ ಮಾ.28 ರಂದು ಬೆಳಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಅವರು ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಕರೆ ಮಾಡಿದ ಅಪರಿಚಿತ ತಾನು ದೆಹಲಿಯ ಪೊಲೀಸ್‌ ಮಾತನಾಡುತ್ತಿದ್ದೇನೆ. ತಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ, ಅಕ್ರಮ ಹಣ ಹೊಂದಿರುವ ಬಗ್ಗೆ ಹಾಗೂ ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಇದೆ. ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್ ಕೇಸ್ ನಡೆಸುತ್ತೇವೆ. ಆದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಖಾತೆಗೆ ವರ್ಗಾಯಿಸಬೇಕು. ನಿಮ್ಮ ಕೋರ್ಟ್ ಕೇಸ್ ಮುಗಿದ ಬಳಿಕ ನಿಮ್ಮ ಹಣ ವಾಪಸ್ ಸಿಗುತ್ತದೆ. ಇಲ್ಲದಿದ್ದರೆ ನಿಮ್ಮ ಮನೆಗೇ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗರವರ ಮೊಬೈಲ್ ಫೋನ್ ನ ವಾಟ್ಸ್ ಆ್ಯಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ವೈದ್ಯರು ತಿಳಿಸಿದ್ದಾರೆ.

ಅಪರಿಚಿತನ ಮಾತಿಂದ ಗಾಬರಿಗೊಂಡ ಡಾ.ಚಿದಂಬರ ಅಡಿಗರವರು ಬ್ಯಾಂಕ್ ಖಾತೆಯಿಂದ, RTGS ಮೂಲಕ ಆತ ತಿಳಿಸಿದ ಬ್ಯಾಂಕ್ ಖಾತೆಗೆ 16,50,000ರೂ. ಹಣ ವರ್ಗಾವಣೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ಅಪರಿಚಿತ ಮತ್ತೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ವೈದ್ಯರು ಅನುಮಾನಗೊಂಡು ದೂರವಾಣಿ ಕರೆ ಕಡಿತಗೊಳಿಸಿದ್ದಾರೆ. ಈ ಬಗ್ಗೆ ತನ್ನ ಸ್ನೇಹಿತರೊಂದಿಗೆ ಈ ಬಗ್ಗೆ ತಿಳಿಸಿದಾಗ ಆನ್ ಲೈನ್ ಮೋಸದ ಬಗ್ಗೆ ತಿಳಿದುಬಂದಿದೆ. ಆದ್ದರಿಂದ ಪೊಲೀಸ್ ದೂರು ದಾಖಲು ಮಾಡಿದ್ದೇನೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ‌ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories