ಮಂಗಳೂರು ಚೂರಿ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದೇ ಕ್ರಮ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಮಸೀದಿ ಮುಂಭಾಗ ವಿಜಯೋತ್ಸವ ಆಚರಣೆ, ಚೂರಿ ಇರಿತ ಪ್ರಕರಣ ಸಂಬಂಧ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿ ಮಾತನಾಡಿದ ಅವರು, ಇಂತಹ ಪ್ರಕರಣಗಳಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಘಟನೆಗೆ ಕಾರಣ ಏನೇ ಇರಬಹುದು. ಆದರೆ ಕಾನೂನು ಕೈಗೆ ತೆಗೆದುಕೊಂಡಾಗ ಕ್ಷಮಿಸುವುದಕ್ಕೆ ಆಗೋದಿಲ್ಲ. ಕೆಲವರು ಪ್ರಚೋದನೆ ಮಾಡಿರಬಹುದು, ಆದರೆ ಸಂಯಮ ಕಾಪಾಡೋದು ನಮ್ಮ ಜವಾಬ್ದಾರಿ. ಕಾನೂನು ಕೈಗೆ ತೆಗೆದುಕೊಂಡವರ ಮೇಲೆ ಕಾನೂನು ಕ್ರಮ ಆಗಲೇಬೇಕು. ಇಂತಹ ಘಟನೆಗಳಾದಾಗ ಸರಕಾರ, ರಾಜಕಾರಣಿಗಳು ತಟಸ್ಥವಾಗಿರಬೇಕು. ಆ ಕೆಲಸ ನಾವು ಮಾಡುತ್ತೇವೆ ಎಂದರು.

ಕರ್ನಾಟಕದಲ್ಲಿ ಕಾಂಗ್ರಸ್‌ಗೆ ನಿರೀಕ್ಷೆಯ ಗೆಲುವು ಸಿಗಲಿಲ್ಲ. ಆದರೆ ಕೇಂದ್ರದಲ್ಲಿ ಜನರು ಮೋದಿಯವರಿಗೆ ಪಾಠ ಕಲಿಸಿದ್ದಾರೆ. ಅವರು ಸರ್ವಾಧಿಕಾರಿ ರೀತಿ ಹೋಗುತ್ತೇವೆ ಅಂದಿದ್ದಕ್ಕೆ ಕಡಿವಾಣ ಬಿದ್ದಿದೆ. ಇನ್ನು ಸರ್ವಾಧಿಕಾರಿ ಧೋರಣೆ ಅನುಸರಿಸೋದಕ್ಕೆ ಆಗೋದಿಲ್ಲ. ಪ್ರಜಾಪ್ರಭುತ್ವ ಉಳಿಸುವ ಫಲಿತಾಂಶವನ್ನು ದೇಶ ಕೊಟ್ಟಿದೆ. ತಾನೇ ಭಗವಂತ ಎಂದು ಸ್ವತಃ ಪ್ರಧಾನಿಯವರೇ ಹೇಳಿದರು. ಈಗ ಸಾಮಾನ್ಯ ಮನುಷ್ಯರಾಗಿದ್ದಾರೆ. ಎಲ್ಲರಿಗೂ ತಗ್ಗಿಬಗ್ಗಿ ಹೋಗುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Latest Indian news

Popular Stories