ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಪ್ರಾಣಿ ಬಲಿಯ ವೀಡಿಯೋ: ಪೊಲೀಸ್ ಪರಿಶೀಲನೆ ವೇಳೆ ಬಹಿರಂಗ: ಪ್ರಕರಣ ದಾಖಲು

ಮಂಗಳೂರು: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ಸಂಬಂಧ ಬಂಧಿತನಾಗಿರುವ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಪ್ರಾಣಿ ಬಲಿಯ ವೀಡಿಯೋ ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಕ್ತಿ ದೇವತೆಯ ಮುಂದೆ ಪ್ರಾಣಿಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬವರ ಫೋಟೋಗೆ ಹಚ್ಚಿರುವ ವಿಡಿಯೋ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಇತ್ತು. ಈ ವೀಡಿಯೋ ಪರಿಶೀಲನೆ ವೇಳೆ ಪೊಲೀಸರಿಗೆ ಲಭಿಸಿದೆ. ಆ ಇಬ್ಬರಿಗೆ ಶಕ್ತಿ ತುಂಬುವುದಕ್ಕೆ ಪ್ರಾಣಿಬಲಿ ನೀಡಿದ್ದಾರೆ ಎನ್ನಲಾಗಿದೆ.
ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸೋಮಶೇಖರ್ ನೀಡಿರುವ ದೂರಿನಂತೆ ಬರ್ಕೆ ಠಾಣೆಯಲ್ಲಿ ಗುರುವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.
ಪ್ರಾಣಿಬಲಿ ಪೂಜೆ ಮಾಡಲು ಪ್ರಸಾದ್ ಅತ್ತಾವರನು ಅನಂತ ಭಟ್‌ಗೆ ಹಣ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ ಮತ್ತು ಅನಂತ ಭಟ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ವಾರದ ಹಿಂದೆ ಬಂಧಿಸಲ್ಪಟ್ಟ ಪ್ರಸಾದ್ ಅತ್ತಾವರನ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ವಿಡಿಯೋಗಳು ಕಂಡು ಬಂದಿವೆ. ಆ ಪೈಕಿ ದೇವಸ್ಥಾನದಲ್ಲಿ ಐದು ಕುರಿಗಳನ್ನು ಬಲಿ ಕೊಡುವ ದೃಶ್ಯ ಇತ್ತು. ಸ್ನೇಹಮಹಿ ಕೃಷ್ಣ ಮತ್ತು ಗಂಗರಾಜು ಬಲ ತುಂಬಲು ಬಲಿ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.