ಬಂಟ್ವಾಳ, ಡಿ. 15: ಬಂಟ್ವಾಳ ತಾಲೂಕಿನ ಬುಡೋಳಿ ಪರಿಸರದ ಪ್ರತಿಷ್ಟಿತ, ವಿಸ್ಡಂಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬುಡೋಳಿ-ಗಡಿಯಾರ ಇದರ, ವಾರ್ಷಿಕ ಕ್ರೀಡಾ ಕೂಟವು ಇತ್ತೀಚೆಗೆ ದಿನಾಂಕ 10/12/2024 ರಿಂದ ಮೂರು ದಿನಗಳವರೆಗೆ ಬಹಳ ಸಂಭ್ರಮದಿಂದ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಜಬ್ಬಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯವರಾದ,
ಶ್ರೀಯುತ ಶಿವಪ್ರಸಾದ್ ರೈ ಯವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹನೀಯ ಮಾತುಗಳನ್ನಾಡಿದರು. ನಂತರ ಆಡಳಿತ ಮಂಡಳಿ ಅಧ್ಯಕ್ಷರಾದ, ಶ್ರೀಯುತ ಅಬ್ದುಲ್ ಜಬ್ಬಾರ್ ರವರು ಕ್ರೀಡಾ ಲಾಂಛನದ ಫಲಕವನ್ನು ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ, ಶಾಲಾ ಸಂಚಾಲಕ ಶ್ರೀ ಅಬ್ದುಲ್ ಖಾದರ್ ಕುಕ್ಕಾಜೆ, ಶಾಲಾ ಮುಖ್ಯ ಶಿಕ್ಷಕ, ಶ್ರೀ ಇಬ್ರಾಹಿಂ. ಒ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ , ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಅಲ್ಲದೆ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ದಿನಾಂಕ 13/12/24 ರ ಶುಕ್ರವಾರ ದಂದು ಇದರ ಸಮಾರೋಪ ಸಮಾರಂಭವನ್ನು ಆಡಳಿತ ಮಂಡಳಿಯ ಅಧ್ಯಕ್ಷರು, ಶಾಲಾ ಸಂಚಾಲಕರು, ಹಾಗೂ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಕ್ರೀಡಾ ಧ್ವಜವನ್ನು ಅವರೋಹಣಗೊಳಿಸುವುದರೊಂದಿಗೆ ಸಮಾಪ್ತಿಗೊಳಿಸಲಾಯಿತು.