ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಯತ್ನ ವಿಫಲಗೊಂಡಿದೆ. ಹಲವು ಸುತ್ತಿನ ಮಾತುಕತೆ ಬಳಿಕವೂ ಅರುಣ್ ಪುತ್ತಿಲ ಪಕ್ಷ ಸೇರ್ಪಡೆ ವಿಫಲವಾಗಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಈ ಬಗ್ಗೆ ಪುತ್ತಿಲ ಪರಿವಾರದ ಅಧ್ಯಕ್ಷರು ಅಧಿಕೃತವಾಗಿ ಆದೇಶಿಸಿದ್ದಾರೆ.

ಕರಾವಳಿಯ ಬಿಜೆಪಿ ಭದ್ರಕೋಟೆಯಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಸ್ವಪಕ್ಷದ ಕಾರ್ಯಕರ್ತರೇ ಟೀಕಿಸುತ್ತಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿರುವಾಗಲೇ ಅರುಣ್ ಕುಮಾರ್ ಪುತ್ತಿಲ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಲಾಗಿದೆ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಅರುಣ್ ಕುಮಾರ್ ಪುತ್ತಿಲ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದರಂತೆ ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರಿನಲ್ಲಿ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರೆಸ್ ಮತ್ತು ಪುತ್ತಿಲ ಪರಿವಾರದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದು ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಅಶೋಕ್ ರೈ ಅವರು ಅಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು.

Latest Indian news

Popular Stories