ಐಸಿಸ್ ನಂಟು ಆರೋಪದಲ್ಲಿ ಬಂಧಿತ ಮಾಜಿ ಶಾಸಕ ದಿ.ಇದ್ದಿನಬ್ಬ ಮೊಮ್ಮಗನಿಗೆ ಜಾಮೀನು

ನವದೆಹಲಿ/ ಮಂಗಳೂರು: ಐಸಿಸ್ ನಂಟಿನ ಆರೋಪದಡಿ ಎನ್‌ಐಎಯಿಂದ ಬಂಧಿತನಾಗಿದ್ದ ಉಳ್ಳಾಲದ ಮಾಜಿ ಶಾಸಕ ದಿ.ಇದ್ದಿನಬ್ಬರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್‌ಗೆ ದೆಹಲಿ‌ ಹೈಕೋರ್ಟ್ ಜಾಮೀನು ನೀಡಿದೆ.

ಐಸಿಸ್ ನಂಟಿನ ಆರೋಪದಡಿ 2021ರ ಆಗಸ್ಟ್ 21ರಂದು ದಿ.ಇದ್ದಿನಬ್ಬರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ನನ್ನು ಯುಎಪಿಎ ಕಾಯ್ದೆಯಡಿ ಎನ್ಐಎ ಬಂಧಿಸಿತ್ತು. ಬಂಧನ ಪ್ರಶ್ನಿಸಿ ಅಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ನೀಡಬೇಕೆಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಆದರೆ ಜಾಮೀನು‌ ನಿರಾಕರಣೆ ಹಿನ್ನೆಲೆಯಲ್ಲಿ ಆತ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದನು. ಸದ್ಯ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ನಿಂದ ಆತನಿಗೆ ಜಾಮೀನು ನೀಡಿದೆ.

ತೀರ್ಪು ನೀಡುವ ವೇಳೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶಗಳನ್ನು ನೀಡಿದ್ದು, ಮೊಬೈಲ್ ನಲ್ಲಿ ಐಸಿಸ್ ಬಾವುಟ, ಕರಪತ್ರ, ಒಸಾಮಾ ಬಿನ್ ಲಾಡನ್ ಭಾಷಣದ ತುಣುಕುಗಳು ಇದ್ದರೆ ಅವರನ್ನು ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ ತೀರ್ಪು ನೀಡಿದೆ‌.

ಅಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದೆ. ಉಗ್ರ ಸಂಘಟನೆಯೊಂದಿಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗುವುದಿಲ್ಲ. ಐಸಿಸ್ ಪರ ವೀಡಿಯೋ ಡೌನ್ ಲೋಡ್, ಭಾಷಣ ಆಲಿಸೋದು ಯುಎಪಿಎ ಕಾಯ್ದೆಯಡಿ ತರಲಾಗಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ತರಲು ಬರಲ್ಲ. ಆರೋಪಿ ಮೊಬೈಲ್ ನಲ್ಲಿ ಲಾಡೆನ್, ಐಸಿಸ್ ಬಾವುಟಗಳು, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದರೆ ಆತನಿಗೆ ಐಸಿಸ್ ನಂಟಿದೆ ಎನ್ನಲಾಗಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಇದು ಇಂಟರ್ ನೆಟ್ ನಲ್ಲಿ ಸಿಗುತ್ತದೆ. ಕುತೂಹಲ ಇರುವ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗಲ್ಲ ಎಂದು ಹೇಳಿದೆ.

Latest Indian news

Popular Stories