ಬೆಳ್ತಂಗಡಿ, ಆ.5: ಟೆಲಿಗ್ರಾಂ ಆ್ಯಪ್ ಮೂಲಕ ಮಹಿಳಾ ಶಿಕ್ಷಕಿಯೊಬ್ಬರಿಗೆ ಪತಿಯನ್ನು ಕೊಂದು ಹಾಕುವುದಾಗಿ ಬೆದರಿಸಿ ಅವರಿಂದ ಒಂದು ಲಕ್ಷ ರೂ.ಗಳ ಸುಲಿಗೆ ಮಾಡಿದ್ದ ಯುವಕನೊಬ್ಬನನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ವೇಣೂರು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸುಲ್ಕೇರಿ ಗ್ರಾಮದ ಅತ್ರಿಂಜ ನಿವಾಸಿ ಅಶ್ವಥ್ ಹೆಬ್ಬಾರ್ (23) ಬಂಧಿತ ಆರೋಪಿ.
ಸುಲ್ಕೇರಿ ಗ್ರಾಮದ ಪೆರೋಡಿತ್ತಾಯಕಟ್ಟೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಎಂಬುವರಿಂದ ನಕಲಿ ಟೆಲಿಗ್ರಾಂ ಖಾತೆ ಬಳಸಿ ಅಶ್ವಥ್ ಮೂರು ಲಕ್ಷ ರೂ. ಹಣ ನೀಡದಿದ್ದರೆ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಜ್ಯೋತಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಎಎಸ್‌ಐ ಸೌಮ್ಯಾ ಜೆ, ಆನಂದ ಎಂ ಮತ್ತು ತಂಡ ಆ.2ರಂದು ಮಧ್ಯರಾತ್ರಿ ತೆಂಕಕರಂದೂರು ಗ್ರಾಮದ ಗುಂಡೇರಿಯಲ್ಲಿ ಆರೋಪಿಯನ್ನು ಬಂಧಿಸಿದೆ.
ಸಿನಿಮಾ ಸ್ಟೈಲ್ ನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸಂತ್ರಸ್ತೆ ಜ್ಯೋತಿ ಪೊಲೀಸರ ನೆರವಿನೊಂದಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆರೋಪಿಗೆ ತಿಳಿಸಿದ್ದಾಳೆ. ಅಳದಂಗಡಿ ಕೆಡುವಿನ ಬಳಿ ಹಣ ಇಡುವಂತೆ ಆರೋಪಿ ಹೇಳಿದ್ದಾನೆ. ಬಳಿಕ ಜ್ಯೋತಿಗೆ ಆ ಸ್ಥಳದಲ್ಲಿ ಹಣ ಇಡಬೇಡಿ ಎಂದು ಸಂದೇಶ ರವಾನಿಸಿ ಮೂರ್ನಾಲ್ಕು ಬಾರಿ ಸ್ಥಳ ಬದಲಾಯಿಸಿದ್ದರು.
ಕೊನೆಗೆ ಆರೋಪಿಗಳು ಸಂತ್ರಸ್ತೆ ಹಣವನ್ನು ಶಿರ್ಲಾಲುವಿನ ಸವಣಾಳು ಕ್ರಾಸ್ ಬಳಿ ಇಡುವಂತೆ ತಿಳಿಸಿದ್ದಾರೆ. ಅದರಂತೆ ಸಂತ್ರಸ್ತೆ ಜ್ಯೋತಿ ಅವರು ಹಣವಿದ್ದ ಬ್ಯಾಗನ್ನು ಸ್ಥಳದಲ್ಲಿ ಇಟ್ಟಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಸ್ಥಳದಿಂದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲೇ ಅಡಗಿಕೊಂಡಿದ್ದ ಪೊಲೀಸರು ಆತನನ್ನು ಹಿಡಿಯುವ ಮುನ್ನ ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿ ಅಶ್ವಥ್ ಹೆಬ್ಬಾರ್‌ನ ಮೊಬೈಲ್ ಫೋನ್ ಟ್ರ್ಯಾಕ್ ಮಾಡಿ ಮಧ್ಯರಾತ್ರಿ ಗುಂಡೇರಿಯಿಂದ ತನ್ನ ಅಣ್ಣನ ಮನೆಯಲ್ಲಿ ಅಡಗಿಕೊಂಡಿದ್ದ ಆತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಬೈಕ್ ಹಾಗೂ ಒಂದು ಲಕ್ಷ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.