Manglore: ವಿಜಯೋತ್ಸವದ ಸಂದರ್ಭದಲ್ಲಿ ಹಿಂಸಾಚಾರ; ಚೂರಿ ಇರಿತ

ಮಂಗಳೂರು: ಮೂರನೇ ಬಾರಿ ಪ್ರಧಾನ ಮಂತ್ರಿ ಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ‌ನಡೆದ ವಿಜಯೋತ್ಸವದ ಬಳಿಕ ಮಸೀದಿಯ ಮುಂಭಾಗ ಘೋಷಣೆ ಕೂಗಿದ್ದಾರೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರಿಗೆ ಗುಂಪೊಂದು ಇರಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್‌ನಲ್ಲಿ ನಡೆದಿದೆ.

ವಿಜಯೊತ್ಸವ ಸಂದರ್ಭ ಬೋಳಿಯಾರು ಮಸೀದಿ ಸಮೀಪ ಬೈಕ್ ಸೀಟಿಗೆ ಬಡಿದು ವಿಜಯೋತ್ಸವ ಘೋಷಣೆಗಳನ್ನು ಬಿಜೆಪಿ ಕಾರ್ಯಕರ್ತರು ಕೂಗಿದ್ದರೆನ್ನಲಾಗಿದೆ. ನಂತರ ವಿಜಯೋತ್ಸವ ಮುಗಿಸಿ ಬೈಕಿನಲ್ಲಿ ಹರೀಶ್ , ನಂದಕುಮಾರ್ ಮತ್ತು ಕೃಷ್ಣ ಕುಮಾರ್ ಸೇರಿ ಮೂವರು ಬೋಳಿಯಾರಿನತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ತಂಡವೊಂದು ಹರೀಶ್ ಮತ್ತು ವಿನೋದ್ ಜೊತೆ ಮಸೀದಿ ಮುಂಭಾಗ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ವಾಗ್ವಾದ ನಡೆಸಿತ್ತು ಎಂದು ತಿಳಿದು ಬಂದಿದೆ. ಈ ವೇಳೆ ಓರ್ವ ಇಬ್ಬರಿಗೆ ಚೂರಿಯಿಂದ ಇರಿದಿದ್ದು, ಇನ್ನೋರ್ವನ ಮೇಲೆ ಹಲ್ಲೆಗೆ ಮುಂದಾದಾಗ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ. ತಕ್ಷಣ ಕೃತ್ಯ ಎಸಗಿದ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಗಾಯಾಳು ಹರೀಶ್ ಮತ್ತು ವಿನೋದ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories