ಮಂಗಳೂರು: ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿನ ಮನೆಯೊಂದಕ್ಕೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು ವಾಹನ, ಚಿನ್ನಾಭರಣವನ್ನು ಕದ್ದೊಯ್ದ ಘಟನೆ ನಡೆದಿದೆ. ಇದು ನಗರದಲ್ಲಿ ನಡೆದ ಚಡ್ಡಿಗ್ಯಾಂಗ್‌ನ ಮತ್ತೊಂದು ಕೃತ್ಯವೆಂಬ ಶಂಕೆ ವ್ಯಕ್ತವಾಗಿದೆ.
ಮನೆಮಂದಿ ಮನೆಯೊಳಗಡೆ ಮಲಗಿದ್ದಾಗಲೇ ಕಿಟಕಿ ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಅಲ್ಲದೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ.
ಕಳೆದ ಶನಿವಾರ ನಗರದ ಕೋಡಿಕಲ್ ಬಳಿ ಮನೆಯೊಂದರ ಕಿಟಕಿ ಮುರಿದು ಕಳವು ಕೃತ್ಯ ನಡೆದಿತ್ತು. ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.
ಅಲ್ಲದೇ ಮತ್ತೊಂದೆಡೆ ಪಂಪ್‌ವೆಲ್‌ನಲ್ಲಿ ಸೂಪರ್ ಮಾರ್ಕೆಟ್ ಗೆ ನುಗ್ಗಿದ ತಂಡವೊಂದು ಕಳ್ಳತನ ಮಾಡಿದೆ.
ನಗರದಲ್ಲಿ ಕಳವು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.